ಯಾದಗಿರಿ: ರಾಜ್ಯದ ನೂತನ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ಯಾವ ಜಿಜೆಪಿ ಮುಖಂಡರಿಗೆ ಮಂತ್ರಿಗಿರಿ ಸಿಗಲಿದೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ, ಸುರಪುರ , ಗುರುಮಿಠಕಲ್, ಹಾಗೂ ಯಾದಗಿರಿ ಸೇರಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಸುರಪುರ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಸೇರ್ಪಡೆಯಾಗಿವೆ. ಸುರಪುರ ವಿಧಾನಸಭಾ ಕ್ಷೇತ್ರದ ರಾಜುಗೌಡ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರದ ವೆಂಕಟರೆಡ್ಡಿ ಮುದ್ನಾಳ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಶರಣ ಬಸಪ್ಪ ದರ್ಶನಾಪುರ್ ಹಾಗೂ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ನಾಗಣ್ಣಗೌಡ ಕಂದಕೂರ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಸುರಪುರ ವಿಧಾನಸಭಾ ಕ್ಷೇತ್ರದ ರಾಜುಗೌಡ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ರಾಜುಗೌಡ ಎಸ್ಟಿ ಸಮುದಾಯದ ರಾಜ್ಯಾಧ್ಯಕ್ಷರಾಗಿದ್ದು, ನಾಯಕ ಸಮುದಾಯದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅವರಿಗೆ ಅಭಿವೃದ್ಧಿ ಪರ ಕಾರ್ಯನಿರ್ವಹಿಸುವ ಹುಮ್ಮಸ್ಸಿದೆ ಎಂಬ ಮಾತುಗಳು ಕಮಲ ಪಕ್ಷದಲ್ಲಿ ಕೇಳಿ ಬರುತ್ತಿವೆ.
ಈ ಮೊದಲು ಬಿಎಸ್ವೈ ಅಧಿಕಾರಾವಧಿಯಲ್ಲಿಯೆ ಯಾದಗಿರಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿತ್ತು. ಹಾಗಾಗಿ ಯಡಿಯೂರಪ್ಪ ಅವರಿಗೂ ಜಿಲ್ಲೆಗೂ ಅವಿನಾಭಾವ ನಂಟಿದೆ. ಜಿಲ್ಲೆಯಿಂದ ಯಾವ ನಾಯಕರಿಗೆ ಬಿಎಸ್ವೈ ಮಂತ್ರಿಗಿರಿ ನೀಡ್ತಾರೆ ಎಂದು ಕಾದುನೋಡಬೇಕಿದೆ.