ಯಾದಗಿರಿ: ಮಹರಾಷ್ಟ್ರದಿಂದ ವಾಪಸ್ ಆಗುತ್ತಿದ್ದ ಕಾರ್ಮಿಕರ ಗುಂಪೊಂದು ಹೋಮ್ ಗಾರ್ಡ್ಗಳ ಜೊತೆ ದಾಂಧಲೆ ನಡೆಸಿ ಸ್ಥಳಿಯ ಬಾಲಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಯರಗೋಳಾ ಚೆಕ್ ಪೋಸ್ಟ್ ಬಳಿ ನಡೆದಿದೆ.
ಇವರು ಗುಂಪು ಕಟ್ಟಿಕೊಂಡು ದಾಂಧಲೆ ನಡೆಸಿ ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಸಿಕ್ಕಿವೆ. ಮುಂಬಯಿಯಿಂದ ಜಿಲ್ಲೆಯ ಯರಗೋಳಾ ಚೆಕ್ ಪೋಸ್ಟ್ ಮಾರ್ಗವಾಗಿ ವಲಸೆ ಕಾರ್ಮಿಕರು ಖಾಸಗಿ ವಾಹನದಲ್ಲಿ ತವರಿಗೆ ವಾಪಸ್ ಬರುತ್ತಿದ್ದರು.
ವಾಪಸ್ ಆದ ಕಾರ್ಮಿಕರನ್ನ ಸ್ಕ್ರೀನಿಂಗ್ ಮಾಡುತ್ತಿರುವಾಗ 50 ವರ್ಷದ ಮಹಿಳೆಯೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕೂಡಲೆ ಆಕೆಯನ್ನು ಅಲ್ಲಿಯ ಆರೋಗ್ಯ ಇಲಾಖೆ ಸಿಬ್ಬಂದಿ ನೂತನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು ಪ್ರಯೋಜನವಾಗದೆ ಮಹಿಳೆ ಕಳೆದ ಸಾಯಂಕಾಲ ಸಾವನ್ನಪ್ಪಿದರು.
ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಮ್ ಗಾರ್ಡ್ಗಳು ಜಿಲ್ಲಾಡಳಿತದ ನಿರ್ದೇಶನದಂತೆ ಮೃತ ಮಹಿಳೆಯ ಜೊತೆ ಬಂದ ಸಂಬಂಧಿಕರನ್ನ ಜಿಲ್ಲೆಯ ಒಳಗೆ ಬಿಡದೆ ಸರ್ಕಾರಿ ಬಸ್ ಬರುವವರೆಗೂ ಕಾಯುವಂತೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತ ಮಹಿಳೆಯ ಸಂಬಂಧಿಕರು ಹೋಮ್ ಗಾರ್ಡ್ಗಳ ಜೊತೆ ದಾಂಧಲೆ ನಡೆಸಿದ್ದಾರೆ.
ಈ ಘಟನೆಯ ದೃಶ್ಯಾವಳಿಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ ಬಾಲಕನ ಮೇಲೆ ಕೂಡಾ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ.