ಯಾದಗಿರಿ: ತಳವಾರ ಮತ್ತು ಪರಿವಾರ ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ತೆಗೆದುಹಾಕಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಳವಾರ ಮತ್ತು ಪರಿವಾರ ಜಾತಿಗಳನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡಿದ ಹಿನ್ನೆಲೆ, ಒಬಿಸಿ ಮೀಸಲಾತಿ ಜಾತಿ ಪಟ್ಟಿಯಿಂದ ಈ ಜಾತಿಗಳನ್ನು ರಾಜ್ಯ ಸರ್ಕಾರ ತೆಗೆದುಹಾಕಿದೆ. ಈ ಕ್ರಮವನ್ನು ಖಂಡಿಸಿ ನಗರದ ವಿದ್ಯಾಮಂಗಲ ಕಾರ್ಯಾಲಯದ ಬಳಿ ವಾಲ್ಮೀಕಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.
ಮೀಸಲಾತಿಯ ವಿಚಾರದಲ್ಲಿ ಸರ್ಕಾರ ಗೊಂದಲವುಂಟು ಮಾಡುತ್ತಿದೆ. ನಮ್ಮ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಒಂದು ಕೈಯಲ್ಲಿ ಹಾಲು, ಇನ್ನೊಂದು ಕೈಯಲ್ಲಿ ವಿಷ ಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭಾನುವಾರ(ನಿನ್ನೆ) ಕಲಬುರಗಿಯಲ್ಲಿ ನಡೆದ ಬಿಜೆಪಿ ರಾಜ್ಯಮಟ್ಟದ ಒಬಿಸಿ ವಿರಾಟ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡುವುದಾಗಿ ಹೇಳಿರುವುದು ಸರಿಯಾದ ಕ್ರಮವಲ್ಲ ಎಂದರು.
ಯಾದಗಿರಿಯಲ್ಲಿ ಬಳ್ಳಾರಿಯ ಬಿಜೆಪಿ ಎಸ್ಟಿ ಸಮಾವೇಶ ಹಿನ್ನೆಲೆ ಪೂರ್ವಭಾವಿ ಸಭೆಗೆ ಬರುತ್ತಿರುವ ಸಚಿವ ಶ್ರೀರಾಮುಲು ಉತ್ತರ ಕೊಟ್ಟು ಸಭೆ ಮಾಡಲಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮನವೊಲಿಸಿದರೂ ಬಗ್ಗದ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಮನವೊಲಿಕೆ ಬಳಿಕ ಪ್ರತಿಭಟನೆ ವಾಪಸ್: ಪ್ರತಿಭಟನಾ ಸ್ಥಳಕ್ಕೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ತಳವಾರ, ಪರಿವಾರ ಎಸ್ಟಿ ಪ್ರಮಾಣ ಪತ್ರದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಈ ಗೊಂದಲವನ್ನು ಸರಿಪಡಿಸುತ್ತೇವೆ. ಪ್ರತಿಭಟನೆ ವಾಪಸ್ ಪಡೆಯಿರಿ ಎಂದು ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಇದನ್ನೂ ಓದಿ: ತಳವಾರ ಮತ್ತು ಪರಿವಾರ ಜಾತಿಗಳನ್ನು ಒಬಿಸಿಯಿಂದ ಕೈಬಿಟ್ಟು ಸರ್ಕಾರ ಅಧಿಕೃತ ಆದೇಶ