ಯಾದಗಿರಿ: ರಸ್ತೆ ಮಧ್ಯೆ ಲಾರಿ ನಿಲ್ಲಿಸಿ ವಾಹನ ಚಾಲಕರನ್ನು ಚಾಕುವಿನಿಂದ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನ ಬಂಧಿಸುವಲ್ಲಿ ಯಾದಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ದೇವದುರ್ಗ ಸುರಪುರ ರಸ್ತೆಯ ಸಣ್ಣ ಬ್ರಿಜ್ ಬಳಿ ರಾತ್ರಿ ಹೊತ್ತು ದರೋಡೆ ನಡೆಸಲಾಗುತ್ತಿದೆ ಅನ್ನೋ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ, ಹಾಗೂ ಡಿವೈಎಸ್ಪಿ ಶಿವನಗೌಡ ಮಾರ್ಗದರ್ಶನಲ್ಲಿ ಪೊಲೀಸ್ ತಂಡ ರಚಿಸಿ, ಹಣ ದರೋಡೆ ಮಾಡುತ್ತಿದ್ದ ಖದೀಮರನ್ನು ಬಂಧಿಸಿದ್ದಾರೆ.
ಕಳೆದ ರಾತ್ರಿ ಬಿದನೂರ ಗ್ರಾಮದ ಕಡೆಯಿಂದ ದೇವದುರ್ಗ ಕಡೆ ಬೈಕ್ ಮೇಲೆ ತೆರಳುತ್ತಿದ್ದ ದರೋಡೆಕೋರರನ್ನ ಬೆನ್ನು ಹತ್ತಿದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಅಜ್ಮೀರ ದರ್ಗಾ ಬಳಿ ಬಂಧಿಸಿದ್ದಾರೆ. ದೇವಪ್ಪ ಮತ್ತು ಮಲ್ಲಪ್ಪ ತಂದೆ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 25 ಸಾವಿರ ನಗದು ಹಣ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.
ಈ ಹಿಂದೆ ಶಹಪುರ ನಗರದ ಮಡಿವಾಳೇಶ್ವರ ಬಡಾವಣೆಯಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸರಗಳ್ಳತನ ಮಾಡಿರುವುದು ತಾವೇ ಎಂದು ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಶಹಪುರ ತಾಲೂಕಿನ ಮೂಲದವರಾದ ಈ ದರೋಡೆಕೋರರ ವಿರುದ್ದ ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.