ಯಾದಗಿರಿ/ಕಲಬುರಗಿ: ಕೋವಿಡ್-19 ಸೋಂಕಿತ ಕಲಬುರಗಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾದ ವ್ಯಕ್ತಿಯ ದ್ವಿತೀಯ ಸಂಪರ್ಕದಲ್ಲಿದ್ದ ಯಾದಗಿರಿ ಜಿಲ್ಲೆಯ ಇಬ್ಬರನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ ರೋಗದ ಗುಣಲಕ್ಷಣಗಳು ಇಲ್ಲದ ಕಾರಣ ಹೋಮ್ ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ತೀವ್ರಗತಿಯಲ್ಲಿ ನಡೆದಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ನಗರದ ಕೋವಿಡ್-19 ಸೋಂಕಿತ ಪಿ-413 ಪೀಡಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾದ ಕಲಬುರಗಿ ನಿವಾಸಿಯನ್ನು ಪತ್ತೆ ಹಚ್ಚಿದ ಅಲ್ಲಿನ ತಂಡ ಗಂಟಲಿನ ದ್ರವದ ಮಾದರಿಯನ್ನು ಕೋವಿಡ್-19 ಪರೀಕ್ಷೆಗಾಗಿ ರವಾನಿಸಿದೆ. ಈ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯು ಯಾದಗಿರಿ ಜಿಲ್ಲೆಯಲ್ಲಿ ಆಪ್ಟಿಕಲ್ ಅಂಗಡಿಯನ್ನು ಹೊಂದಿದ್ದು, ಏಪ್ರಿಲ್ 15 ರಿಂದ 22ರ ವರೆಗೆ ಅಂಗಡಿ ತೆರೆದಿರುತ್ತಾರೆ.
ಶಂಕಿತರ ಜ್ವರ ತಪಾಸಣೆ ಮಾಡಲಾಗಿದೆ. ಯಾವುದೇ ರೋಗ ಲಕ್ಷಣಗಳು ಕಂಡು ಬರದೆ ಇರುವುದರಿಂದ ಹೋಮ್ ಕ್ವಾರಂಟೈನ್‍ನಲ್ಲಿ ಅವಲೋಕನೆಗಾಗಿ ಇರಿಸಲಾಗಿರುತ್ತದೆ. ಇನ್ನುಳಿದವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಗ್ರೀನ್ ಝೋನ್ ನಲ್ಲಿದ್ದ ಯಾದಗಿರಿ ಜಿಲ್ಲೆಗೆ ಈಗ ಕೊರೊನಾ ಭೀತಿ ಎದುರಾದಂತಾಗಿದೆ.