ಯಾದಗಿರಿ: ರಾಜ್ಯದಲ್ಲಿ ಆಗ ಉರ್ದು ಭಾಷೆ ಪ್ರಭಾವದಿಂದಾಗಿ ಕನ್ನಡ ಭಾಷೆ ಅಳಿವಿನಂಚಿಗೆ ತಲುಪಿತ್ತು. ಇಂತಹ ಅವಧಿಯಲ್ಲಿ ಕನ್ನಡ ನಾಡು ನುಡಿ ಉಳಿವಿಗಾಗಿ ಅಸ್ತಿತ್ವಕ್ಕೆ ಬಂದಿದ್ದೇ ಎರಡನೇ ಕನ್ನಡ ಸಾಹಿತ್ಯ ಸಂಘ. ಅಂದಿನಿಂದ ಇಂದಿನವರೆಗೆ ಕನ್ನಡ ನಾಡು ನುಡಿ ಉಳಿವಿಗಾಗಿ ಈ ಸಂಘ ಸೇವೆ ಸಲ್ಲಿಸುತ್ತಾ ಬಂದಿದೆ.
ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳು ಹೈದರಾಬಾದ್ ನಿಜಾಮ ಆಳ್ವಿಕೆಗೆ ಒಳಪಟ್ಟಿದ್ದವು. ನಿಜಾಮರ ಆಡಳಿತ ಅವಧಿಯಲ್ಲಿ ಉರ್ದು ಭಾಷೆ ಆಡಳಿತ ಭಾಷೆಯಾಗಿದ್ದು ಕನ್ನಡ ಭಾಷೆ ಮಾತನಾಡುವರು ಕೂಡ ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿತ್ತು. ಉರ್ದು ಭಾಷೆ ಜೊತೆ ಮರಾಠಿ ಹಾಗೂ ತೆಲುಗು ಭಾಷೆ ಪ್ರಭಾವ ಹೆಚ್ಚಾಗಿತ್ತು. ಈ ಮೂರು ಭಾಷೆಗಳ ನಡುವೆ ಕನ್ನಡ ಭಾಷೆ ಕಡಗಣಿಸಲ್ಪಟ್ಟಿತ್ತು. ಕನ್ನಡ ಭಾಷೆ ನಾಡು ನುಡಿ, ಸಂಸ್ಕೃತಿ, ಸಂಪ್ರದಾಯ ಉಳಿಸಲು ಈ ಭಾಗದಲ್ಲಿನ ಸಾಹಿತಿಗಳು ಒಂದಾಗಿ ಕನ್ನಡ ನಾಡಿನ ಅಸ್ತಿತ್ವಕ್ಕಾಗಿ ಒಗ್ಗಟ್ಟಾದರು. ಬಳಿಕ ಕನ್ನಡ ಸಾಹಿತ್ಯ ಸಂಘವನ್ನು 1943 ಏಪ್ರಿಲ್ 5ರಂದು ಸ್ಥಾಪಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ಕನ್ನಡ ನಾಡಿನ ಪ್ರೇಮ ಹೊಂದಿದ್ದ ಬುದ್ಧವಂತಶೆಟ್ಟರು 1943 ರಲ್ಲಿ ಕನ್ನಡದ ನಾಡು ನುಡಿ ಉಳಿಸಿ ಬೆಳೆಸಲು ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟ ಭಾಗದಲ್ಲಿ 2ನೇ ಕನ್ನಡ ಸಾಹಿತ್ಯ ಸಂಘ ಅಸ್ತಿತ್ವಕ್ಕೆ ತಂದರು. ಕಚೇರಿ ಹೊರಭಾಗದಲ್ಲಿ ಉರ್ದು ಭಾಷೆ ನಾಮಫಲಕ ಹಾಕಿ ಒಳಗಡೆ ನಿಜಾಮರಿಗೆ ಗೊತ್ತಾಗದಂತೆ ಹಲವಾರು ಕಾರ್ಯಕ್ರಮ ಮಾಡಿಕೊಂಡು ಬಂದಿದ್ದರು.
ಅಂದಿನಿಂದ ಕನ್ನಡ ಸಾಹಿತ್ಯ ಸಂಘದ ಮೂಲಕ ಜನರಲ್ಲಿ ಸಾಹಿತ್ಯ, ಸ್ವಾತಂತ್ರ್ಯಭಿಮಾನ ಮೂಡುವಂತೆ ಮಾಡಿದೆ. ಹಿರಿಯ ಸಾಹಿತಿಗಳಾದ ದ.ರಾ. ಬೆಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಸುಮಾರು 450 ಕ್ಕೂ ಹೆಚ್ಚು ಸಾಹಿತಿಗಳನ್ನು ಸಂಘದ ಕಚೇರಿಗೆ ಕರೆಸುವ ಮೂಲಕ ಕನ್ನಡ ನಾಡಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ನಿಜಾಮರ ಹಾವಳಿಯಲ್ಲಿ ಕೂಡ ಕನ್ನಡ ಭಾಷೆ ಉಳಿವಿಗಾಗಿ ಬುದ್ಧಿವಂತಶೆಟ್ಟರು ಹಾಗೂ ಅನೇಕರು ಕನ್ನಡ ನಾಡಿಗೆ ಸೇವೆ ಸಲ್ಲಿಸಿದ್ದಾರೆ.
ಕನ್ನಡ ನಾಡು ನುಡಿ ಉಳಿವಿಗಾಗಿ ಸಂಘ ಸ್ಥಾಪನೆಯಾಗಿ 78 ವರ್ಷ ಪೂರೈಸಿದೆ. ಅಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿನ ಪುಸ್ತಕಗಳನ್ನು ತೆಗೆದುಕೊಂಡು ಬಂದು ಕನ್ನಡ ಸಾಹಿತ್ಯ ಸಂಘದ ಕಚೇರಿಯಲ್ಲಿ ಇಟ್ಟಿದ್ದ ಪರಿಣಾಮ, ಸಾರ್ವಜನಿಕರಿಗೆ ಕನ್ನಡ ಭಾಷೆ, ಸಂಪ್ರದಾಯ ಹಾಗೂ ಸಂಸ್ಕೃತಿ ಬಗ್ಗೆ ಜ್ಞಾನ ಪಡೆಯಲು ಸಹಕಾರಿಯಾಯಿತು. ಅಲ್ಲದೇ, ನೂರಾರು ಸಾಹಿತಿಗಳು ಕೂಡ ಆಗಮಿಸಿ ಕನ್ನಡ ಭಾಷೆ ಬಗ್ಗೆ ಜನರಲ್ಲಿ ಅಭಿಮಾನ ಹುಟ್ಟಿಸುವ ಕೆಲಸ ಮಾಡಿರುವುದು ಸಂತಸದ ವಿಚಾರವಾಗಿದೆ.