ಯಾದಗಿರಿ: ಕ್ವಾರಂಟೈನ್ ಕೇಂದ್ರಗಳಾಗಿ ಮಾರ್ಪಾಡಾಗಿರುವ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿ ಹೇಳದಂತಾಗಿದೆ. ಆ ಶಾಲೆಗಳಿಗೆ ತೆರಳಲು ಇದೀಗ ಶಿಕ್ಷಕರು ಭಯ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಅಂತರ್ ರಾಜ್ಯಗಳಿಂದ ವಾಪಸ್ ಆಗಿರುವ ಸಾವಿರಾರು ವಲಸಿಗರನ್ನು ಜಿಲ್ಲಾಡಳಿತ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಿದೆ. ಕ್ವಾರಂಟೈನ್ ಮಾಡಲಾದ ವಲಸಿಗರಲ್ಲೇ ಹೆಚ್ಚು ಕೊರೊನಾ ಸೋಕು ಹರಡಿರುವ ಕಾರಣ, ಇದೀಗ ಆ ಶಾಲೆಗಳಿಗೆ ತೆರಳಲು ಶಿಕ್ಷಕರು ಭಯ ಪಡುವಂತಾಗಿದೆ.
ಜೂ.8ರಿಂದ ಶಿಕ್ಷಕರು ಶಾಲೆಗಳಿಗೆ ಹೋಗಬೇಕೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಜಿಲ್ಲೆಯ ಕ್ವಾರಂಟೈನ್ ಕೇಂದ್ರವಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಇದೀಗ ಕೊರೊನಾ ಭೀತಿ ಸೃಷ್ಟಿಯಾಗಿರುವ ಕಾರಣ ಅಲ್ಲಿಗೆ ಹೋಗಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.
ವಿವಿಧ ಶಾಲಾಗಳ ಆವರಣದಲ್ಲಿ ಕಸದ ರಾಶಿ, ಔಷಧಿಗಳ ರಾಶಿ, ಮಾಸ್ಕ್ ಬಿದ್ದಿರುವ ಕಾರಣ ಶಾಲೆಗಳು ಗಬ್ಬು ನಾರುತ್ತಿವೆ. ಬಹುತೇಕ ಸರ್ಕಾರಿ ಶಾಲೆಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಲ್ಲ. ಹೀಗಾಗಿ ವೈರಸ್ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ 735 ಸೋಂಕಿತರ ಪೈಕಿ 733 ಕೇಸ್ ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಾಗಿದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ಬಂದಿರುವ ವಲಸಿಗರನ್ನು ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.