ಸುರಪುರ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಚಿಸಲಾದ ತಹಶೀಲ್ದಾರ್ ನೇತೃತ್ವದ ಟಾಸ್ಕ್‌ಫೋರ್ಸ್ ತಂಡ ಸಾರ್ವಜನಿಕರೊಂದಿಗೆ ಸಭೆ ನಡೆಸಿತು.
ಸಭೆಯಲ್ಲಿ ಮಂದಿರ, ಮಸೀದಿ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಯಾವುದೇ ಆಚರಣೆ ನಡೆಸದೆ ಮನೆಗಳಲ್ಲೇ ಆಚರಣೆ ನಡೆಸಬೇಕು. ಈ ಮೂಲಕ ಕೊರೊನಾ ಹರಡದಂತೆ ತಡೆಯಲು ಸಹಕರಿಸುವಂತೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಸೂಚಿಸಿದರು. ಮದುವೆ ಮಾಡುವವರು ಕೇವಲ 50 ಜನರಿಗಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ. ಹೆಚ್ಚು ಜನ ಸೇರಿದ್ದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಇದೇ ವೇಳೆ ಅವರು ಎಚ್ಚರಿಸಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಆರ್.ವಿ. ನಾಯಕ್ ಮಾತನಾಡಿ, ತಾಲೂಕಿನಲ್ಲಿ ವಿದೇಶದಿಂದ ಬಂದ 17 ಜನರನ್ನು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ಯಾರಲ್ಲೂ ಕೊರೊನಾ ಸೋಂಕು ಕಂಡುಬಂದಿಲ್ಲ. ಜಿಲ್ಲೆಗೆ ವಾಪಸ್ಸಾಗಿರುವ ಐವರಿಗೆ 14 ದಿನಗಳ ಕಾಲಾವಧಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕ್ಷೌರದ ಅಂಗಡಿಗಳನ್ನು 31ನೇ ತಾರೀಖಿನವರೆಗೆ ಬಂದ್ ಮಾಡುವುದಾಗಿಯೂ ಅವರು ತಿಳಿಸಿದರು.
ಮುಸ್ಲಿಂ ಸಮುದಾಯದ ಜನರು ನಮಾಜ್ ಅನ್ನು ತಮ್ಮ ಮನೆಗಳಲ್ಲಿಯೇ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ, ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ, ಪಿಎಸ್‌ಐ ಚಂದ್ರಶೇಖರ ಸೇರಿ ಅನೇಕರು ಭಾಗಿಯಾಗಿದ್ದರು.