ಸುರಪುರ: ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 30ರ ಸತ್ಯಂಪೇಟೆಯಲ್ಲಿನ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಜನರು ಆಗ್ರಹಿಸಿದ್ದಾರೆ.
ರಸ್ತೆ ದುರವಸ್ಥೆ ಕುರಿತು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜ ಅಪ್ಪಾರಾವ್ ನಾಯಕ ಮಾತನಾಡಿ, ಕಳೆದ 5 ವರ್ಷಗಳ ಹಿಂದೆ ಯುಜಿಡಿ ಯೋಜನೆಯಡಿ ರಸ್ತೆಗಳನ್ನು ಮಾಡಿದ್ದು, ಎಲ್ಲ ರಸ್ತೆಗಳು ಕಿತ್ತು ಹೋಗಿ ಗುಂಡಿಗಳು ಬಿದ್ದಿದ್ದರೂ ರಸ್ತೆ ದುರಸ್ತಿಗೆ ನಗರಸಭೆಯಾಗಲಿ, ತಾಲೂಕು ಆಡಳಿತವಾಗಲಿ ಗಮನಹರಿಸುತ್ತಿಲ್ಲ. ಹಸನಾಪುರ ಪೆಟ್ರೋಲ್ ಪಂಪ್ನಿಂದ ರಾಯಚೂರು ಹೆದ್ದಾರಿಗೆ ಕೂಡುವ ರಸ್ತೆ ಸಂಪೂರ್ಣ ತಗ್ಗು ಗುಂಡಿಗಳಿಂದ ಆವೃತವಾಗಿದೆ. ಈ ರಸ್ತೆಯಲ್ಲಿ ಜನರು ಓಡಾಡಲು ನಿತ್ಯವೂ ಪರದಾಡಬೇಕಾಗಿದೆ. ಅಲ್ಲದೆ ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಅಪಘಾತಕ್ಕೀಡಾಗಿರುವ ಘಟನೆಗಳು ನಡೆದಿವೆ ಎಂದರು.
ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸತ್ಯಂಪೇಟೆಯಲ್ಲಿನ ಎಲ್ಲ ರಸ್ತೆಗಳನ್ನು ನಗರಸಭೆ ಕೂಡಲೇ ದುರಸ್ತಿಗೊಳಿಸಬೇಕು ಹಾಗೂ ರಾಯಚೂರಿಗೆ ತೆರಳುವ ಜಿಲ್ಲಾ ಹೆದ್ದಾರಿಗೆ ಸಂಬಂಧಿದ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.