ಯಾದಗಿರಿ: ಕೊರೊನಾದಿಂದಾಗಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ವಿದ್ಯಾಗಮ ಅಡಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಆದರೆ ಗ್ರಾಮಾಂತರ ಭಾಗದಲ್ಲಿ ವಿದ್ಯಾಗಮ ಎಂದರೆ ಏನು ಗೊತ್ತಿಲ್ಲದ ಕಾರಣ ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.
ಕೊರೊನಾದಿಂದ ಶಾಲೆಗಳು ಬಂದ್ ಆಗಿರಬಹುದು. ಆದರೆ, ಶಿಕ್ಷಣ ಇಲಾಖೆ ಮಕ್ಕಳಿಗೆ ಶಿಕ್ಷಣ ಕೊಡುವುದು ಮಾತ್ರ ನಿಲ್ಲಿಸಿಲ್ಲ. ವಿದ್ಯಾಗಮ ಅಡಿ ಶಾಲೆ ಆವರಣ, ಬಯಲು ಪ್ರದೇಶ ಹಾಗೂ ಗುಡಿ ಗುಂಡಾರಗಳಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಕೊಂಚ ಮಟ್ಟಿಗೆ ಈ ವಿದ್ಯಾಗಮಕ್ಕೆ ಹಿನ್ನಡೆಯಾಗಿದೆ. 6ನೇ ತರಗತಿಯಿಂದ 10ನೇ ತರಗತಿ ಮಕ್ಕಳು ವಿದ್ಯಾಗಮಕ್ಕೆ ಕೈಕೊಟ್ಟು ಕೂಲಿ ಕೆಸಲಕ್ಕೆ ತೆರಳಿದ್ದಾರೆ. ಯಾದಗಿರಿಯಂತಹ ಹಿಂದುಳಿದ ಜಿಲ್ಲೆಯ ಗ್ರಾಮಾಂತರ ಭಾಗದ ಮಕ್ಕಳಿಗೆ ಹಾಗೂ ಪೋಷಕರಿಗೆ ವಿದ್ಯಾಗಮ ಎಂದರೆ ಏನು ಎಂಬುದೇ ಗೊತ್ತಿಲ್ಲ.
ಜಿಲ್ಲೆಯಲ್ಲಿ ಸದ್ಯ ಭತ್ತ ಮತ್ತು ಹತ್ತಿ ಬೆಳೆಯ ಜಮೀನುಗಳಲ್ಲಿ ಕಳೆ ಕೀಳುವ ಕೆಲಸ ನಡೆದಿದೆ. ಹೀಗಾಗಿ ಪೋಷಕರು ಮಕ್ಕಳಿಗೆ ಟಂಟಂ ವಾಹನಗಳಲ್ಲಿ ಕುರಿಸಿಕೊಂಡು ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ. ಅಧಿಕಾರಿಗಳು ವಿದ್ಯಾಗಮ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ.