ಗುರುಮಠಕಲ್: ದೇಶದ ಸಮಗ್ರತೆಗಾಗಿ ಜೀವನವನ್ನು ಅರ್ಪಿಸಿದ ಬಲಿದಾನಿಗಳ ಸ್ಮರಣಾರ್ಥವಾಗಿ ಎಸ್.ಎನ್.ಕೆ ಗುರುಮಠಕಲ್ ಪ್ರೀಮಿಯರ್ ಲೀಗ್‌ಗೆ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಚಾಲನೆ ನೀಡಿದರು.
ಪಟ್ಟಣದ ಜವಾಹಾರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಎಸ್.ಎನ್.ಕೆ ಗುರುಮಠಕಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡೆಗಳು ನಡೆಸುತ್ತಿರುವ ಆಯೋಜಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿವೆ ಎಂದರು.
ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಪಂದ್ಯಗಳು ಕೇವಲ ಆಟಗಾರರ ಉತ್ಸಾಹವನ್ನು ಹೆಚ್ಚಿಸುವ ಉದ್ದೇಶವಾಗಿದೆ. ಎಲ್ಲಾ ಕ್ರೀಡಾಪಟುಗಳು ಆಟದ ಕಡೆ ಗಮನ ಹರಿಸಿದರೆ ಗೆಲುವು ಸಾಧಿಸಿದಂತೆಯೇ ಎಂದು ಸಲಹೆ ನೀಡಿದರು.
ಈ ಟೂರ್ನಿಗೆ ಶರಣಗೌಡ ಕಂದಕೂರು ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ಸಪ್ತಗಿರಿ ಟೈರ್ಸ್, ಶಕ್ತಿ ಸನ್ ರೈಡರ್ಸ್, ಹಿರೋ ರೈಡರ್ಸ್, ಇಂಡಿಯನ್ ರೆಡ್ಡಿ ಶೂಲ್ಡರ್ಡ್, ಜೆ.ಎಸ್.ಆರ್ ಲಯನ್ಸ್, ಜೈ ಸೇವಾಲಾಲ್ ಕಿಂಗ್ಸ್, ಗುರುಮಠಕಲ್ ವಾರಿಯರ್ಸ್, ಪತ್ತಿ ಬಳಗಾರ್ ರೈಡರ್ಸ್ ತಂಡಗಳು ಈ ಟೂರ್ನಿಯಲ್ಲಿ ಆಡುತ್ತಿವೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಪಿ.ಎಸ್.ಐ ಹಣಮಂತ ಬಂಕಲಗಿ, ಜೆಡಿಎಸ್ ಬ್ಲಾಕ್ ಘಟಕದ ಅಧ್ಯಕ್ಷ ಶರಣು ಆವಂಟಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುರುಮಠಕಲ್ ತಾಲೂಕು ಘಟಕದ ಅಧ್ಯಕ್ಷ ನಾರಾಯಣರೆಡ್ಡಿ ಪಾಟೀಲ್, ರಘುನಾಥರೆಡ್ಡಿ ಗವಿನೋಳ ಸೇರಿದಂತೆ ಎಂಟು ತಂಡಗಳ ಮಾಲೀಕರು ಹಾಗೂ ಆಟಗಾರರು ಇದ್ದರು.
ಓದಿ: ಬಳ್ಳಾರಿ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಚಾನಾಳ್ ಶೇಖರ್ ಆಯ್ಕೆ