ಯಾದಗಿರಿ: ರೈತರು ಇಷ್ಟು ದಿನ ಮಳೆ ಇಲ್ಲದೇ ಕಂಗಾಲಾಗಿದ್ರೂ ಅಲ್ಪ ಸ್ವಲ್ಪ ಮಳೆಗೆ ಹತ್ತಿ ಬೆಳೆ ಉತ್ತಮ ಫಸಲು ಬಂದಿದ್ದು, ಇನ್ನೆನು ಸ್ವಲ್ಪ ದಿನಗಳಲ್ಲಿ ರೈತರ ಕೈಗೆ ಬೆಳೆಯ ಆದಾಯ ಸೇರಲಿದೆ ಅನ್ನುವಷ್ಟರಲ್ಲಿ ಆ ಹತ್ತಿ ಹೊಲಗಳಿಗೆ ರಾತ್ರೋರಾತ್ರಿ ಕಳ್ಳರು ನುಗ್ಗಿ ಹತ್ತಿ ಬಿಡಿಸಿಕೊಂಡು ಹೋಗುತ್ತಿದ್ದಾರೆ ಇದರಿಂದ ರೈತರು ತೀವ್ರ ಆತಂಕಗೊಂಡಿದ್ದಾರೆ.
ಹೌದು ವಡಗೇರಾ ತಾಲೂಕಿನ ಗುರುಸುಣಿ, ಮಲಹಳ್ಳಿ, ಹುಲಕಲ್(ಜೆ), ಗಡ್ಡೆಸೂಗುರು, ಬಬಲಾದ, ಬೀರನಾಳ, ನಾಯ್ಕಲ್, ದೋರನಹಳ್ಳಿ, ಮನಗನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ರಾತ್ರಿ ಹೊಲಕ್ಕೆ ಕಳ್ಳರು ಒಕ್ಕರಿಸಿ ಹತ್ತಿ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ರೈತಾಪಿ ವರ್ಗಕ್ಕೆ ಕೈಗೆ ಬಂದು ತುತ್ತು ಬಾಯಿಗೆ ಬರದಂತಹ ಸ್ಥಿತಿ ಎದುರಾಗಿದೆ. ಕಳೆದ ಬಾರಿಗಿಂತ ಈ ಬಾರಿ ಬಹಳಷ್ಟು ರೈತರು ಹತ್ತಿ ಬೆಳೆಗೆ ಮೊರೆ ಹೋಗಿದ್ದು, ಮಳೆಯಾಶ್ರಿತ ಗ್ರಾಮಗಳ ರೈತರ ಹೊಲಗಳಲ್ಲಿ ಎಲ್ಲೆಂದರಲ್ಲಿ ಹತ್ತಿ ಬೆಳೆಯೇ ಕಾಣುತ್ತಿದೆ. ಕೆಲವೊಂದು ಹೊಲಗಳು ರಸ್ತೆ ಬದಿಯಲ್ಲೇ ಇರುವುದರಿಂದ ಕಳ್ಳಕಾಕರಿಗೆ ಮತ್ತಷ್ಟು ಅನುಕೂಲವಾದಂತಾಗಿದೆ.
ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ರಾತ್ರಿ ಹೊಲಗಳಿಗೆ ಕಾವಲು ಹೊರಟಿದ್ದಾರೆ. ದರ ಕುಸಿತದಿಂದ ಈಗಾಗಲೇ ಬಹುತೇಕ ರೈತರು ಮಾನಸಿಕವಾಗಿ ಕುಗ್ಗಿದ್ದಾರೆ. ಇದರ ನಡುವೆ ಕಳ್ಳರ ಹಾವಳಿ ರೈತರಿಗೆ ಮತ್ತಷ್ಟು ಆಘಾತವನ್ನುಂಟು ಮಾಡಿದೆ. ವಡಗೇರಾ ಪೊಲೀಸರು ಈ ಭಾಗದಲ್ಲಿ ರಾತ್ರಿ ಗಸ್ತು ತಿರುಗಿ ರೈತರ ಬೆಳೆದ ಹತ್ತಿ ಬೆಳೆಗಳಿಗೆ ರಕ್ಷಣೆ ನೀಡಿ, ಕಳ್ಳರಿಗೆ ಹೆಡೆಮುರಿ ಕಟ್ಟಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.