ಗುರುಮಠಕಲ್: ಇಲ್ಲಿನ ತಾಲೂಕು ಕೇಂದ್ರದ ಮೂಲಕ ಹಾದು ಹೋಗುವ ಪುಟಪಾಕ - ಚಿತ್ತಾಪುರ ರಾಜ್ಯ ಹೆದ್ದಾರಿ ಗುಂಡಿಗಳಿಂದ ಕೂಡಿದೆ. ಪರಿಣಾಮ ಸಂಚಾರಕ್ಕೆ ಸಂಕಟವಾಗಿದೆ. ಹೀಗಾಗಿ, ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಸುಮಾರು 64 ಕೋಟಿ ರೂಪಾಯಿ ವೆಚ್ಚದ ಪುಟಪಾಕ- ಚಿತ್ತಾಪುರ ರಾಜ್ಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಬಂದಲ್ಲಿಗೆ ಬರಲಿ ಎಂಬಂತೆ ತನ್ನ ಬಿಲ್ ಎತ್ತಿಕೊಂಡು ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಂದಿನಿಂದ ಇಲ್ಲಿಯವರೆಗೆ ಅನಾಥವಾಗಿರುವ ರಸ್ತೆಯನ್ನು ಕೇಳುವವರೇ ಇಲ್ಲದಂತಾಗಿದೆ.
ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲು ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ನಾಂದಿಹಾಡಿತ್ತು. ಆದರೆ, ಕೆಲಸ ಅರ್ಧಕ್ಕೆ ನಿಂತಿದ್ದು ನೆನೆಗುದಿಗೆ ಬಿದ್ದಿದೆ. ಹೀಗಾಗಿ, ಹೆದ್ದಾರಿಯಲ್ಲಿ ಗುಂಡಿಗಳದ್ದೇ ದರ್ಬಾರ್ ಆಗಿದೆ.
ಕೋಟಿಗಟ್ಟಲೇ ಅನುದಾನದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡದೆ, ಕೊಕ್ಕೆ ಹಾಕಲಾಗಿದೆ. ಅನುದಾನ ರಸ್ತೆಗೋ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೇಬಿಗೋ ಎಂಬ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದು ಅಪಸ್ವರಕ್ಕೆ ಕಾರಣವಾಗಿದೆ.
ಹಿಮಾಲಪೂರ, ಹಿಮಾಲಪೂರ ತಾಂಡಾ, ಚಿಂತನಪಲ್ಲಿ, ಯದ್ಲಾಪೂರ, ರಾಂಪೂರ, ಕೋಟಗೇರಾ, ಗಾಜರಕೋಟ, ಹೊಸಳ್ಳಿ, ಮೋಟನಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಯಾರೊಬ್ಬರೂ ರಸ್ತೆ ದುರಸ್ತಿಗೆ ಬಗ್ಗೆ ಯೋಚಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಸ್ತೆ ತಡೆದು ಪ್ರತಿಭಟಿಸುವುದಾಗಿ ಗ್ರಾಮಸ್ಥರಿಂದ ಎಚ್ಚರಿಕೆ
ಮತಕ್ಷೇತ್ರದಲ್ಲಿ ರಸ್ತೆಗಳಲ್ಲಿ ಸಂಚರಿಸುವುದು ಎಂದರೆ ಮುಖ ಕಿವುಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಬಂದರೆ ರಸ್ತೆ ಸಂಚಾರವೇ ಬೇಡ ಎನ್ನುವಂತಾಗಿದೆ. ಈ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಅಪಘಾತದ ಸ್ಥಳಕ್ಕೆ ಆ್ಯಂಬುಲೆನ್ಸ್ ಬರುವುದು ಕಷ್ಟಕರವಾಗಿದೆ. ಗರ್ಭಿಣಿ ಯರನ್ನು, ರೋಗಿಗಳನ್ನು, ಮುದುಕರನ್ನು ಹಳ್ಳಿಗಳಿಂದ ಪಟ್ಟಣಕ್ಕೆ ಕರೆತರುವುದು ಸಾಹಸದ ಕೆಲಸದಂತಾಗಿದೆ. ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಕ್ರಮ ಜರುಗಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪುಟಪಾಕ - ಚಿತ್ತಪೂರ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದ ವಿಷಯ ನಮ್ಮ ಗಮನಕ್ಕೆ ಬಂದಿದೆ. ರಸ್ತೆ ನಿರ್ಮಿಸಿದ ಗುತ್ತಿಗೆದಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಈಗಾಗಲೇ ಇಲಾಖೆಯಿಂದ ಖುದ್ದು ನಾವೇ ರಸ್ತೆಯನ್ನು ಪರಿಶೀಲಿಸಿದ್ದೇವೆ. ಒಂದು ವಾರದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ನಾಗಪ್ಪ ತಿಳಿಸಿದ್ದಾರೆ.
ಓದಿ: ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಸುಮಲತಾ ಭೂಮಿ ಪೂಜೆ: ಇದರ ಹಿಂದಿದೆಯಾ ಅಭಿಷೇಕ್ ರಾಜಕೀಯ ಭವಿಷ್ಯ?