ಗುರುಮಠಕಲ್: ಕ್ರೀಡೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಅಂಕಣದಲ್ಲಿ ಮಾತ್ರ ಎದುರಾಳಿಗಳಾಗಿರುತ್ತಾರೆ. ಪಂದ್ಯದ ನಂತರ ನಿಮ್ಮ ನಡುವೆ ವೈರತ್ವ ಮೂಡಬಾರದು. ಕ್ರೀಡೆಗಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ. ಸೋಲಿನ ನಂತರ ಪರಿಶ್ರಮದಿಂದ ಗೆಲುವು ಸಾಧಿಸಲು ಸಾಧ್ಯ ಎನ್ನುವುದೂ ನೆನಪಿರಲಿ ಎಂದು ಪಿಎಸ್‌ಐ ಹಣಮಂತ ಬಂಕಲಗಿ ಹೇಳಿದರು.
ಪಟ್ಟಣದ ಗಾಂಧಿ ಮೈದಾನದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಯುವಕ ಸಂಘದ ವತಿಯಿಂದ ರಾತ್ರಿ ಆಯೋಜಿಸಿದ್ದ ಹೊನಲು ಬೆಂಕಿನ ಮುಕ್ತ ವಾಲಿಬಾಲ್ ಟೂರ್ನಮೆಂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡೆಗಳು, ವ್ಯಾಯಾಮ, ಯೋಗ, ಕಸರತ್ತುಗಳಿಂದ ದೇಹವು ಸದೃಢವಾಗುತ್ತದೆ. ಸದೃಢ ಶರೀರದಲ್ಲಿ ಮಾತ್ರ ಸದೃಢ ಮನಸ್ಸಿರಲು ಸಾಧ್ಯ. ನಮ್ಮ ಸರ್ವತೋಮುಖ ಆರೋಗ್ಯಕ್ಕೆ ಆಟಗಳು ಪೂರಕವಾಗಿದ್ದು, ಗೆಲುವಿಗಾಗಿ ಶ್ರಮಿಸಿ. ಆದರೆ, ಸೋಲು-ಗೆಲುವುಗಳೆರಡೂ ಶಾಶ್ವತವಲ್ಲ ಎನ್ನುವ ಅರಿವಿನಿಂದ ಆಟದಲ್ಲಿ ಮನಸ್ಸನ್ನು ತೊಡಗಿಸಬೇಕು ಎಂದು ಕಿವಿ ಮಾತು ಹೇಳಿದರು.
ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಆಶೀರ್ವಚನ ನೀಡಿ ಮೊದಲ ಪಂದ್ಯಕ್ಕೆ ಚಾಲನೆ ನೀಡಿದರು.