ಸುರಪುರ: ಕರ್ನಾಟಕ ನವನಿರ್ಮಾಣ ಸೇನೆ ಕೆಂಭಾವಿ ಹೋಬಳಿ ಘಟಕದಿಂದ ಇಂದು ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಂಭಾವಿ ಹೋಬಳಿಯ ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಚಾಂದ್ ಪಾಷ ಮುಲ್ಲ ಮಾತನಾಡಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿ ಮಣಗುತ್ತಿ ಗ್ರಾಮದಲ್ಲಿನ ಕನ್ನಡಿಗ ಯುವಕರ ಮೇಲೆ ಶಿವಸೇನೆಯ ಗೂಂಡಾಗಳು ಪುಂಡಾಟಿಕೆ ಮೆರೆದಿದ್ದು, ಇದನ್ನು ಕನ್ನಡಿಗರು ಸಹಿಸದ ಸಂಗತಿಯಾಗಿದೆ.
ಕಳೆದ 60 ವರ್ಷಗಳಿಂದಲೂ ರಾಜ್ಯದಲ್ಲಿ ಗಡಿ ವಿಚಾರವಾಗಿ ಎಂಇಎಸ್ ಮತ್ತು ಶಿವಸೇನೆಯ ಗೂಂಡಾಗಳು ಗಡಿ ಭಾಗದಲ್ಲಿ ನಿರಂತರವಾಗಿ ಪುಂಡಾಟಿಕೆ ಮಾಡುತ್ತ ಬಂದಿದ್ದಾರೆ. ಆದರೆ ಸರ್ಕಾರಗಳು ಇವರ ಪುಂಡಾಟಕ್ಕೆ ಕಡಿವಾಣ ಹಾಕದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದೀಗ ಮಣಗುತ್ತಿ ಗ್ರಾಮದಲ್ಲಿನ ಯುವಕರ ಮೇಲೆ ದಾಂಧಲೆ ನಡೆಸಿದ್ದು, ಕೂಡಲೇ ಸರ್ಕಾರ ಎಲ್ಲಾ ಗೂಂಡಾಗಳನ್ನು ಬಂಧಿಸಬೇಕು. ಜೊತೆಗೆ ರಾಜ್ಯದಲ್ಲಿನ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನು ನಿಷೇಧಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.