ಸುರಪುರ: ಅನೇಕ ವರ್ಷಗಳಿಂದ ರಾಜ್ಯದಲ್ಲಿ ಆಚರಿಸಿಕೊಂಡು ಬರುತ್ತಿರುವ ಹಿಂದಿ ಸಪ್ತಾಹವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಹೇರಿಕೆಯ ಮಾಡುವುದರ ಮೂಲಕ ಪ್ರಾದೇಶಿಕ ಭಾಷೆಗಳನ್ನು ನಿರ್ಮೂಲನೆ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಅಧ್ಯಕ್ಷ ವೆಂಕಟೇಶ್ ನಾಯಕ್ ಬೈರಿಮರಡಿ ಮಾತನಾಡಿ, ಈ ದೇಶಕ್ಕೆ ಒಂದು ರಾಷ್ಟ್ರ ಭಾಷೆಯೆಂದು ಯಾವುದೂ ಇಲ್ಲ. ಹಿಂದಿ ಕೇವಲ ಆಡಳಿತ ಭಾಷೆ. 22 ಭಾಷೆಗಳು ರಾಷ್ಟ್ರ ಭಾಷೆಗಳಾಗಿವೆ. ಕೇಂದ್ರ ಸರ್ಕಾರ ಹಿಂದಿಯನ್ನು ಜನರ ಮೇಲೆ ಬಲವಂತದಿಂದ ಹೇರುತ್ತಾ ಬರುತ್ತಿದ್ದು, ಕಳೆದ 21 ವರ್ಷದಿಂದ ಈ ಕಾರ್ಯ ನಡೆದಿದೆ. ಇದಕ್ಕೆ ಕರ್ನಾಟಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಎಂದೂ ಆಸ್ಪದ ನೀಡುವುದಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ಮುಂದುವರಿಸಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.