ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಡಿ ಅನುಷ್ಠಾನದಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಕಾರ್ಯನಿರ್ವಹಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ವಾರ್ಷಿಕ 155.05 ಕೋಟಿ ರೂ. ಆರ್ಥಿಕ ಗುರಿ ನಿಗದಿಪಡಿಸಲಾಗಿರುತ್ತದೆ. ಅದರಂತೆ 621 ಕಾಮಗಾರಿಗಳ ಭೌತಿಕ ಗುರಿಯನ್ನು ನಿಗದಿ ಪಡಿಸಲಾಗಿರುತ್ತದೆ. ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಭೌತಿಕ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಬೇಕು ಎಂದು ಅವರು ಹೇಳಿದರು.
ಈ ಅನುದಾನದಡಿ ಕೈಗೊಂಡಿರುವ ಸಿಸಿ ರೋಡ್, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ರಸ್ತೆಗಳ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ಶೌಚಾಲಯ ಕಟ್ಟಡ, ನಮ್ಮ ಹೊಲ ನಮ್ಮ ದಾರಿ ಹಾಗೂ ಕ್ರೀಡಾಂಗಣ ಸೇರಿದಂತೆ ಇತರೆ ಕಾಮಗಾರಿಗಳನ್ನು ವಿಳಂಬ ಮಾಡದೆ ನಿರ್ವಹಣೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೆಆರ್‍ಐಡಿಎಲ್ ಇಲಾಖೆಗೆ 183 ಕಾಮಗಾರಿಗಳ ವಾರ್ಷಿಕ ಗುರಿ ನಿಗದಿ ಪಡಿಸಲಾಗಿದ್ದು, ಈವರೆಗೆ 28 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಇನ್ನೂ ಹಲವು ಕಾಮಗಾರಿಗಳು ಚಾಲನೆಯಲ್ಲಿವೆ. ಅದರಂತೆ ಇನ್ನುಳಿದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಬಂದಿರುವ ಅನುದಾನ ಸರಿಯಾಗಿ ಬಳಕೆ ಮಾಡಿಕೊಂಡು ನಿಗದಿತ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.