ಯಾದಗಿರಿ: ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ರಂಗು ಪಡೆದಿದ್ದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಂದು ಬಹಿರಂಗ ಪ್ರಚಾರ ಕೊನೆಗೊಂಡಿದ್ದು, ಇದೇ ತಿಂಗಳ 29 ರಂದು ಮತದಾನ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಧರ್ಮವನ್ನು ಪಾಲಿಸಿಕೊಂಡು ಲೋಕಸಭೆ ಚುನಾವಣೆ ಒಟ್ಟಾಗಿ ಎದುರಿಸಿದ್ದವು. ಆದರೆ, ಈ ಸ್ಥಳೀಯ ಸಂಸ್ಥೆಗಳ ಶಹಾಪುರ ನಗರಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸದೇ ಜೆಡಿಎಸ್ ಹಾಗೂ ಕಾಂಗ್ರೆಸ್ ಸ್ವತಂತ್ರ್ಯವಾಗಿ ಎದುರಿಸುತ್ತಿವೆ. ಈ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ತಿರುಗೇಟು ನೀಡಲು ಭಾರಿ ಕಸರತ್ತು ನಡೆಸಿದೆ. ಶಹಾಪುರ ಸ್ಥಳೀಯ ಕಾಂಗ್ರೆಸ್ ಪಕ್ಷದ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ಮಾಜಿ ಬಿಜೆಪಿ ಶಾಸಕ ಗುರು ಪಾಟೀಲ್ ಶಿರವಾಳ, ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡ ಅಮೀನ್ರೆಡ್ಡಿ ಪಾಟೀಲ್ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ.
ಇನ್ನು ಪ್ರತಿಯೊಬ್ಬ ಮುಖಂಡರು ಪಕ್ಷದ ವರ್ಚಸ್ಸಿಗಿಂತ ತಮ್ಮ ವೈಯಕ್ತಿಕ ವರ್ಚಸ್ಸಿಗೆ ಬೆಲೆ ನೀಡುತ್ತಿದ್ದಾರೆ. ಇತ್ತ ಬಿಜೆಪಿ ಪಕ್ಷದ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಪಕ್ಷಕ್ಕಿಂತ ದೊಡ್ಡವರಿಲ್ಲ ಎಂದು ಗುರುತಿಸಿಕೊಂಡ್ರೆ, ಶಾಸಕ ದರ್ಶನಾಪುರ ತಮ್ಮದೆಯಾದ ವೈಯಕ್ತಿಕ ವರ್ಚಸ್ಸನ್ನು ಹೊಂದಿದ್ದಾರೆ. ಇನ್ನು ಯಾವುದೇ ಪಕ್ಷದಲ್ಲಿದ್ದರೂ ಜಯಸಾಧಿಸುವಂತಹ ಸಾಮರ್ಥ್ಯ ಶಾಸಕ ದರ್ಶನಾಪುರ ಹೊಂದಿದ್ದಾರೆ. ಕಳೆದ ಬಾರಿ ಇಲ್ಲಿ ಪುರಸಭೆ ಇದ್ದಾಗ ಕೇವಲ 23 ವಾರ್ಡ್ಗಳಿದ್ದವು. ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದರಿಂದ 31 ವಾರ್ಡ್ಗಳಾಗಿದ್ದು ಈ ಎಲ್ಲ ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ.