ಯಾದಗಿರಿ: ನಗರದಲ್ಲಿ ಸೋಮವಾರ ಮಳೆ ಜೊತೆಗೆ ಬಿರುಗಾಳಿ ಬೀಸಿದ ಪರಿಣಾಮ ಇಲ್ಲಿಯ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮಾರಾಟಕ್ಕಾಗಿ ಸಂಗ್ರಹಿಸಿದ ಶೇಂಗಾ ಬೆಳೆ ಮಳೆಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಎ.ಪಿ.ಎಮ್.ಸಿ ಆವರಣದಲ್ಲಿ ಮಾರಾಟಕ್ಕಾಗಿ ಸಂಗ್ರಹಿಸಿದ 50 ರಿಂದ 60 ಕ್ವಿಂಟಾಲ್ ಶೇಂಗಾ ಮಳೆಯಿಂದ ನಷ್ಟವಾಗಿದ್ದು, ಕೂಡಲೇ ನಷ್ಟಕ್ಕೆ ಒಳಗಾದ 13 ರಿಂದ 15 ಜನ ರೈತರಿಗೆ ಸರ್ಕಾರದಿಂದ ಪರಿಹಾರಕ್ಕಾಗಿ ಪತ್ರ ಬರೆದು ರೈತರಿಗೆ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಕಲ್ಲೂರು, ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುಮಂಗಲಾ ದೇವಿ, ವರ್ತಕರ ಸಂಘದ ಅಧ್ಯಕ್ಷರು ಹಾಗೂ ಬೆಳೆ ನಷ್ಟಕ್ಕೆ ಒಳಗಾದ ರೈತರು ಸೇರಿದಂತೆ ಇತರರಿದ್ದರು.