ಸುರಪುರ: ನಗರ ಸೇರಿದಂತೆ ಶಹಾಪುರ ಮತ್ತು ಹುಣಸಗಿ ತಾಲೂಕಿನ ಕೊರೊನಾ ಶಂಕಿತರ ಮುಂಜಾಗ್ರತೆಗಾಗಿ ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ವತಿಯಿಂದ ನಿಷ್ಠಿ ಇಂಜಿನಿಯರಿಂಗ್ ವಿದ್ಯಾರ್ಥಿ ನಿಲಯದಲ್ಲಿ ಸೂಪರ್‌ವೈಸ್ಡ್ ಕ್ವಾರಂಟೈನ್ ಸೆಂಟರ್ ಆರಂಭಿಸಲಾಗಿದೆ.
ಒಟ್ಟು 100 ಹಾಸಿಗೆಗಳ ಕೇಂದ್ರದಲ್ಲಿ ಮಹಿಳಾ ಮತ್ತು ಪುರುಷರ ವಿಭಾಗವನ್ನು ಪ್ರತ್ಯೇಕವಾಗಿ ರಚಿಸಲಾಗಿದೆ. ಪ್ರತಿ ಪರೀಕ್ಷಣಾ ತಂಡದಲ್ಲಿ 12 ಸಿಬ್ಬಂದಿ ನೇಮಿಸಲಾಗಿದ್ದು, ಇದರಲ್ಲಿ ವೈದ್ಯರು ಮತ್ತು ಪರೀಕ್ಷಣಾ ಸಿಬ್ಬಂದಿ ಇರಲಿದ್ದಾರೆ ಎಂದು ಕೇಂದ್ರದ ನೋಡಲ್ ಅಧಿಕಾರಿ ಡಾ: ಓಂಪ್ರಕಾಶ್ ಅಂಬುರೆ ತಿಳಿಸಿದ್ದಾರೆ.
ತಾಲೂಕಿನಿಂದ ಇದುವರೆಗೆ ವಿದೇಶದಿಂದ ಬಂದ 22 ಜನರನ್ನು ಮನೆಗಳಲ್ಲಿಯೇ ಇರಿಸಿ ಹೊರ ಬರದಂತೆ ಸೂಚಿಸಲಾಗಿತ್ತು. ಮತ್ತು ದೆಹಲಿ ನಿಜಾಮುದ್ದೀನ್ ಮಸೀದಿ ಜಮಾತ್‌ನಲ್ಲಿ ಭಾಗವಹಿಸಿ ಬಂದವರನ್ನು ಅರಕೇರಾ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲ್ಗಿತ್ತು. ಇನ್ನು ಮುಂದೆ ಮೂರು ತಾಲೂಕಿನಲ್ಲಿಯ ಶಂಕಿತರನ್ನು ನಗರದ ಕ್ವಾರಂಟೈನ್‌ನಲ್ಲಿಯೇ ಇರಿಸಲು ಅನುಕೂಲವಾಗಲಿದೆ ಎಂದು ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.