ಗುರುಮಠಕಲ್: ತಮ್ಮ ಜಮೀನು ಸಂಬಂಧ ಮೂಲ ನಕಲು ಪ್ರತಿ ಸಿಗದ ಹಿನ್ನೆಲೆ, ಹೈದರಾಬಾದ್ನಿಂದ ಬಂದ ದಂಪತಿ ಬಸ್ ನಿಲ್ದಾಣದಲ್ಲಿ ದಿನ ದೂಡುವಂತಾಗಿದೆ.
ಅತ್ತ ಊರಿಗೂ ತೆರಳಲಾಗದೇ, ಬಸ್ ನಿಲ್ದಾಣದಲ್ಲಿಯೇ ಇದ್ದು, 16 ದಿನಗಳಿಂದ ಬಸ್ ನಿಲ್ದಾಣ ಮತ್ತು ತಹಶೀಲ್ದಾರ್ ಕಚೇರಿಗೆ ಈ ಬಡ ದಂಪತಿ ಅಲೆದಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆಡಪಳ್ಳಿ ಗ್ರಾಮದ ಪ್ರಮಿಳಾ ಹಾಗೂ ವೆಂಕಟರೆಡ್ಡಿ ಪರದಾಟ ನಡೆಸುತ್ತಿರುವ ದಂಪತಿ ಆಗಿದ್ದಾರೆ.
ಇವರು ಹೈದರಾಬಾದ್ನಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಪ್ರಮಿಳಾ ಪೋಷಕರಿಗೆ ಇಬ್ಬರು ಹೆಣ್ಣು ಮಕ್ಕಳು. ಈ ಹಿನ್ನೆಲೆ, ಪ್ರಮಿಳಾ ತವರೂರು ಗುರುಮಠಕಲ್ ತಾಲೂಕಿನ ಹಿಮಲಾಪುರ ಗ್ರಾಮದ ತನ್ನ ಪಿತ್ರಾರ್ಜಿತ ಆಸ್ತಿ ಪಡೆಯುವ ಸಲುವಾಗಿ ಜಮೀನಿನ ದಾಖಲೆ ಪಡೆಯಲು ಹೈದರಾಬಾದ್ನಿಂದ ಇದೇ 6ರಂದು ಗುರುಮಠಕಲ್ಗೆ ಆಗಮಿಸಿದ್ದರು.
ಇದನ್ನೂ ಓದಿ: ಬಾಗಲಕೋಟೆ: ಬರೋಬ್ಬರಿ 3.25 ಲಕ್ಷ ರೂ.ಗೆ ಮಾರಾಟವಾದ ಕಿಲಾರಿ ಹೋರಿ..! ಏನಿದರ ಸ್ಪೆಷಾಲಿಟಿ?
ತಹಶೀಲ್ ಕಚೇರಿಗೆ ತೆರಳಿ ಜಮೀನಿನ ಮೂಲ ನಕಲು ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ 16 ದಿನಗಳಾದರೂ ಕಂದಾಯ ಅಧಿಕಾರಿಗಳು ಮೂಲ ನಕಲು ಪ್ರತಿ ನೀಡಿಲ್ಲ. ಇದರಿಂದ ಕಳೆದ 16 ದಿನಗಳಿಂದ ಗುರುಮಠಕಲ್ ಬಸ್ ನಿಲ್ದಾಣದಲ್ಲಿಯೇ ಪ್ರಮಿಳಾ ತನ್ನ ಪತ್ನಿ ಜೊತೆ ವಾಸ ಮಾಡುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿ ವಾಸ ಮಾಡಿ, ನಿತ್ಯವೂ ತಹಶೀಲ್ ಕಚೇರಿಗೆ ಅಲೆದಾಡುತ್ತಿರುವ ಕುಟುಂಬ ಕಂಡು ಸ್ಥಳೀಯರು ಮರುಕ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.