ಯಾದಗಿರಿ: ನಾರಾಯಣಪುರ ಸ್ಕಾಡಾ ಯೋಜನೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ. ಕಾಂಗ್ರೆಸ್ ಸರಕಾರ ಇಡೀ ದೇಶದಲ್ಲಿ 2000 ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದೆ. ಅದರಲ್ಲಿ ನಾರಾಯಣಪುರ ಜಲಾಶಯವೂ ಒಂದು. ಶಾಸಕ ರಾಜೂಗೌಡಗೆ ಬುದ್ಧಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಕುಟುಕಿದರು.
ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ನಾನು ಸುಳ್ಳು ಹೇಳಿದರೆ ಒಂದೇ ವೇದಿಕೆಗೆ ಚರ್ಚೆಗೆ ಬರಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ. ನಾವೆಷ್ಟು ಅಭಿವೃದ್ಧಿ ಮಾಡಿದ್ದೇವೆ, ನೀವೆಷ್ಟು ಅಭಿವೃದ್ಧಿ ಮಾಡಿರುವುದು ಜನರಿಗೆ ಗೊತ್ತಾಗುತ್ತದೆ ಎಂದು ತಿಳಿಸಿದರು.
ಸಂವಿಧಾನ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ: ತೈಲ ಬೆಲೆ, ಅನಿಲ ದರ, ಅಡುಗೆ ಎಣ್ಣೆ, ರಸಗೊಬ್ಬರ, ಜನಸಾಮಾನ್ಯರು ಬಳಸುವ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ರಾಜಕೀಯ ಬಿಟ್ಟೇವೇ ಹೊರತು, ಕಾಂಗ್ರೆಸ್ ಕೊಟ್ಟ ಮಾತನ್ನು ತಪ್ಪಿಸೋದಿಲ್ಲ. ಬಸವಾದಿ ಶರಣರಂತೆ ನುಡಿದಂತೆ ನಡೆಯುತ್ತೇವೆ. ಬಿಜೆಪಿ ಪಕ್ಷದವರಿಗೆ ಸಂವಿಧಾನ ಮೇಲೆ ನಂಬಿಕೆ ಇಲ್ಲ.
ಮನುವಾದಿಗಳಿಗೆ ನಂಬಿಕೆ ಇಲ್ಲ, ಮೋದಿ ಸರಕಾರ ರೈತರ ಆದಾಯ ದುಪ್ಪಟ್ಟು ಮಾಡಿಲ್ಲ. ಹೊರದೇಶದಿಂದ ಕಪ್ಪು ಹಣ ತರುತ್ತೇನೆ. ಬಡವರ ಅಕೌಂಟ್‌ಗೆ 15 ಲಕ್ಷ ರೂ ಬೀಳುತ್ತೆ ಎಂದು ಸುಳ್ಳು ಹೇಳವರಿಗೆ ವೋಟ್ ಹಾಕಬೇಡಿ. ಬೊಮ್ಮಾಯಿ ಸರಕಾರ ರಕ್ತ ಕುಡಿಯುತ್ತಿದೆ. ಗುತ್ತಿಗೆದಾರರಿಂದ 40 ಪರ್ಸೆಂಟ್ ಪಡೆಯುತ್ತಿದೆ ಎಂದು ಗುತ್ತಿಗೆದಾರರು ಮೋದಿಗೆ ದೂರು ನೀಡಿದರು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರ್ತೀವಿ: ಅಚ್ಛೇ ದಿನ ಬಂದಿಲ್ಲ. ನಾವು ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತವೆ. ನಾವು ಅಧಿಕಾರಕ್ಕೆ ಬಂದ್ರೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ. ಹಾಲಿಗೆ 5 ರೂ ಇದ್ದು, ಅದನ್ನು 6 ರೂ ಗಳಿಗೆ ಹೆಚ್ಚಿಸಲಾಗುವುದು. ಮೋದಿ ಅಚ್ಛೆ ದಿನ್ ಬರುತ್ತದೆ ಎಂದಿದ್ದರು? ಆದರೆ, ಅಚ್ಛೆ ದಿನ ಬಂದೇ ಇಲ್ಲ ಎಂದು ತಿರುಗೇಟು ನೀಡಿದರು.
ಕಂದಾಯ ಗ್ರಾಮ ಕಾನೂನು ಮಾಡಿದ್ದು ಕಾಂಗ್ರೆಸ್: ನಾನು ಸಿಎಂ ಆಗಿದ್ದ ವೇಳೆ ಕಾಗೋಡು ಮಂತ್ರಿ ಕಂದಾಯ ಮಂತ್ರಿ ಆಗಿದ್ದರು. ಆ ವೇಳೆ ಲಂಬಾಣಿ ತಾಂಡಾಗಳನ್ನು ಹಾಗೂ ಕುರುಬರಹಟ್ಟಿ, ನಾಯಕನ ಹಟ್ಟಿ, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಮಾಡುವ ಕಾನೂನೂ ಜಾರಿಗೆ ತಂದೆವು. ಹಿಂದೆ ದೇವರಾಜರ ಅರಸರ ಕಾಲದಲ್ಲಿ ಉಳುವವನೇ ಭೂಮಿ ಒಡೆಯ ಅಂತ ಮಾಡಿದ್ದರು, ಅದೇ ರೀತಿ ಅದು ಖಾಸಗಿ ಭೂಮಿ ಅಥವಾ ಸರಕಾರಿ ಜಾಗ,ಅರಣ್ಯ ಜಾಗವಿರಲಿ ಅಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿದ್ದರೆ, ವಾಸಿಸುವನು ಮನೆ ಒಡೆಯ ಕಾನೂನು ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಇದನ್ನೂಓದಿ:ಮುಂಬೈನಲ್ಲಿ ಎರಡು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ