ಸುರಪುರ: ಶಿಕ್ಷಣ ಪ್ರತಿಯೊಬ್ಬರ ಬದುಕು ಬದಲಿಸುವ ಅಸ್ತ್ರವಾಗಿದೆ. ಆದ್ದರಿಂದ ವಿದ್ಯೆಗೆ ವಿಶೇಷ ಮನ್ನಣೆ ನೀಡಲಾಗಿದೆ. ಇದರಿಂದ ಕಲಿಸುವ ಗುರುಗಳ ಮೇಲೂ ವಿಶೇಷ ಜವಾಬ್ದಾರಿ ಇದೆ ಎಂದು ಶಾಸಕ ರಾಜುಗೌಡ ಹೇಳಿದರು.
ನಗರದ ಕುಂಬಾರ ಪೇಟೆಯ ಪ್ರೇರಣಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಗುರುವಿನ ಕೃಪೆ ಇಲ್ಲದಿದ್ದರೇ ಯಾರು ಏನನ್ನೂ ಸಾಧಿಸಲಾಗದು. ಅವರ ಮಾರ್ಗದರ್ಶನ, ವಿದ್ಯಾರ್ಥಿಗಳ ಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಇನ್ನೂ ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮುಂದಿನ ಭಾರಿ ಶೇ.65ರಷ್ಟು ತಲುಪಿಸುವಂತೆ ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ, ಮುಖಂಡ ಹೆಚ್.ಸಿ.ಪಾಟೀಲ ಹಾಗೂ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ, ಸೋಮರಡ್ಡಿ ಮಂಗಿಹಾಳ, ಆರ್.ಕೆ ಕೋಡಿಹಾಳ, ಚಂದ್ರಶೇಖರ ವಕ್ರಾಣಿ, ವಿವೇಕ್ ಇದ್ದರು.