ಯಾದಗಿರಿ: ನಗರದ ಹೊರ ಭಾಗದಲ್ಲಿರುವ ನೂತನ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪನೆಯಾದ ಆರ್ಟಿಪಿಸಿಆರ್ ಲ್ಯಾಬ್ನ್ನ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಿದರು.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೊರೊನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸರ್ಕಾರ ಇದಕ್ಕೆ ಮನ್ನಣೆ ನೀಡಿದ ನಂತರ ಆರ್ಟಿಪಿಸಿಆರ್ ಲ್ಯಾಬ್ ಸ್ಥಾಪನೆಗೊಂಡಿದ್ದು, ಇದನ್ನ ಇಂದು ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಿದರು.
ಬಳಿಕ ನಗರದ ವಿಶ್ವರಾದ್ಯ ಕಾಲೋನಿಯಲ್ಲಿ 1.70 ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಹೈಟೆಕ್ ಗ್ರಂಥಾಲಯ ಕಟ್ಟಡದ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಅಲ್ಲಿಂದ ನೇರವಾಗಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಆವರಣಕ್ಕೆ ತೆರಳಿದ ಸಚಿವರು, ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ ಬಸ್ಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಿಗೆ ವೈದ್ಯರ ಸಮೇತ ಈ ಬಸ್ಗಳು ತೆರಳಲಿದ್ದು, ಹಳ್ಳಿಗಳಲ್ಲಿನ ಜನರು ಇದರ ಉಪಯೋಗ ಪಡೆಯಬೇಕೆಂದು ಸೂಚಿಸಿದರು.
ತದನಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಭು ಚವ್ಹಾಣ್, ಕೊರೊನಾ ವೈರಸ್ ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.