ಯಾದಗಿರಿ: ಮಾಸ್ಕ್ ಹಾಕದವರಿಗೆ ದಂಡದ ಪ್ರಶ್ನೆಯಲ್ಲ, ಇದು ಜೀವದ ಪ್ರಶ್ನೆ, ಒಬ್ಬರಿಗೆ ಕೊರೊನಾ ಅಂಟಿದ್ರೆ ಇಡೀ ಕುಟುಂಬಕ್ಕೆ ವ್ಯಾಪಿಸುತ್ತೆ, ಜಾಗೃತಿ ಮೂಡಿಸೋದಕ್ಕೆ ದಂಡ ವಿಧಿಸಲಾಗುತ್ತಿದೆ ಅಂತ ಯಾದಗಿರಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಈಶಾನ್ಯ ಶಿಕ್ಷಕರ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಗೆ ಭಾಗಿಯಾಗಲು ಯಾದಗಿರಿ ನಗರಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಸ್ಕ್ ಧರಿಸದವರಿಗೆ ದಂಡ ಹಾಕುವ ವಿಚಾರಕ್ಕೆ ವಿರೋಧ ಯಾಕೆ?, ದಂಡ ಬೀಳದಿರುವ ಹಾಗೆ ಜನರು ಮಾಸ್ಕ್ ಹಾಕಿದರೆ ಆಯ್ತು, ಬಡವರ ಬಳಿ ಹಣ ಕೀಳಬೇಕೆಂಬುವ ಉದ್ದೇಶದಿಂದ ದಂಡ ವಿಧಿಸುತ್ತಿಲ್ಲ, ಮಾಸ್ಕ್ ವಿಚಾರವಾಗಿ ಕೆಲವರು ರಾಜಕಾರಣ ಮಾಡಲು ಹೊರಟಿದ್ದಾರೆ ಇದು ಒಳ್ಳೆಯದಲ್ಲ ಅಂತ ತಿಳಿಸಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆ ವಿಚಾರವಾಗಿ ಮಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ಯಾರನ್ನ ಅಭ್ಯರ್ಥಿ ಮಾಡುತ್ತೆ ಅದು ನಮಗೆ ಸಂಬಂಧ ಇಲ್ಲ, ಅವರು ಕುಸುಮ ಅವರನ್ನ ನಿಲ್ಲಿಸಿದ್ದು, ಸರಿ -ತಪ್ಪು ಅಂತ ಜನ ನಿರ್ಧರಿಸುತ್ತಾರೆ. ಅವರ ಗಂಡನ ಕೊಲೆ ವಿಚಾರ ಎಲ್ಲವನ್ನೂ ಜನ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ತಾರೆ ಅಂದ್ರು.
ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರವಾಗಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಯಾವ ಚುನಾವಣೆ ನಡೆದರೂ ಜನರು ಬಿಜೆಪಿಗೆ ಬೆಂಬಲಿಸುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿ 25 ಕ್ಷೇತ್ರ ಕಾಂಗ್ರೆಸ್ ಕಳೆದುಕೊಂಡಿದೆ. ಉಪ ಚುನಾವಣೆ ಸೇರಿದಂತೆ ವಿಧಾನ ಪರಿಷತ್ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಮುನಿರತ್ನರಿಗೆ ಸ್ಥಾನಮಾನ ವಿಚಾರ ಕುರಿತು ಹೇಳಿಕೆ ನೀಡಿದ ಈಶ್ವರಪ್ಪ, ಮುನಿರತ್ನ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಕ್ಕೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಬಹುತೇಕರಿಗೆ ಸ್ಥಾನ ಸಿಕ್ಕಿದೆ, ಮುನಿರತ್ನ ಅವರಿಗೂ ಸ್ಥಾನ ಸಿಗಲಿದೆ. ಈ ಕುರಿತು ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಅಂತ ತಿಳಿಸಿದರು.
ಸಿ.ಟಿ. ರವಿ ಅವರನ್ನು ದಕ್ಷಿಣ ಭಾರತದ ಪ್ರಭಾರಿಯನ್ನಾಗಿ ನೇಮಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ ಇಡೀ ದೇಶದ ಉಸ್ತುವಾರಿ ಕೊಟ್ರು ನಿಭಾಯಿಸುವ ಛಾತಿ ಸಿ.ಟಿ. ರವಿ ಅವರಿಗೆ ಇದೆ, ಅವರನ್ನು ದಕ್ಷಿಣ ಭಾರತದ ಪ್ರಭಾರಿ ಮಾಡಿದ್ದಕ್ಕೆ ಸಂತೋಷವಿದೆ ಎಂದರು.