ಯಾದಗಿರಿ: ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಲು ಮಹಾತ್ಮ ಗಾಂಧೀಜಿ ಹೇಳಿದ್ದರು. ಇದೀಗ ನರೇಂದ್ರ ಮೋದಿ ಅವರು ಬಂದ ನಂತರ ದೇಶದಿಂದ ಕಾಂಗ್ರೆಸ್ ಮಾಯವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಗಾಂಧೀಜಿ ಹೇಳಿದ ಮಾತನ್ನು ಮೋದಿ ಜಾರಿಗೆ ತರುತ್ತಿದ್ದಾರೆ. ಧರ್ಮ ಅಂದ್ರೆ ಮಾನವೀಯತೆ. ಕಾಂಗ್ರೆಸ್‌ನವರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಂತ ಇಬ್ಭಾಗ ಮಾಡಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕಿತ್ತು. ಕೆಲವು ಮತಾಂಧರು ದೇಶದಲ್ಲಿ ಗಲಭೆ, ಗೂಂಡಾಗಿರಿ ಮಾಡುವ ಪ್ರಯತ್ನ ನಡೆಸ್ತಿದ್ದಾರೆ. ಭಯೋತ್ಪಾದಕ, ಗೂಂಡಾಗಿರಿ, ಮತಾಂಧರಿಗೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ಇದರಿಂದಾಗಿ ದೇಶದಲ್ಲಿ ಆ ಪಕ್ಷ ನಿರ್ನಾಮ ಆಗ್ತಿದೆ ಎಂದು ಟೀಕಿಸಿದರು.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಸಾಕಷ್ಟು ಸಭೆಗಳನ್ನು ನಡೆಸಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಯತ್ನಿಸಿದರು. ಆದರೆ, ಅದು ಕೈಗೂಡಲಿಲ್ಲ. 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂತೆ ಕರ್ನಾಟಕದಲ್ಲೂ ನಮ್ಮದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಈಶ್ವರಪ್ಪ ಭವಿಷ್ಯ ನುಡಿದರು.
ಕೃಷ್ಣನ ರಣತಂತ್ರವೇ ಬಿಜೆಪಿ ರಣತಂತ್ರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾರ್ಯಕರ್ತರನ್ನು ಸಚಿವರನ್ನಾಗಿ ಮಾಡಬಹುದು, ಸಿಎಂ ಮಾಡಬಹುದು. ಕಾರ್ಯಕರ್ತರಾಗಿ ಉಳಿಸಬಹುದು. ಇದೆಲ್ಲ ಯುದ್ಧದ ರಣತಂತ್ರ. ಕೃಷ್ಣನ ರಣತಂತ್ರವೇ ಬಿಜೆಪಿ ರಣತಂತ್ರವಾಗಿದೆ. ದಿಗ್ವಿಜಯ ಸಾಧನೆಗೆ ಕೃಷ್ಣ ಯಾವ ರೀತಿ ರಣತಂತ್ರ ಮಾಡಿದ್ರೋ, ಅದೇ ರೀತಿ ಎಲ್ಲಾ ರಣತಂತ್ರ ಮಾಡಿ ಯುದ್ದಕ್ಕೆ ತಯಾರಿದ್ದೇವೆ ಎಂದು ಹೇಳಿದರು.
ಮಧ್ಯಂತರ ಚುನಾವಣೆ ಮಾಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೇ ಚಾಮುಂಡೇಶ್ವರಿಯಲ್ಲಿ ಸೋತಿದ್ದಾರೆ. ಬಳಿಕ ಸರ್ಕಾರವನ್ನೇ ಕಳೆದುಕೊಂಡಿದ್ದಾರೆ. ಉಪ ಚುನಾವಣೆಗಳಲ್ಲೂ ಅವರ ಪಕ್ಷ ಸೋತಿದೆ. ಕಾಂಗ್ರೆಸ್ ಸೋಲಿಸುವ ದೊಡ್ಡ ಪಡೆ ಬಿಜೆಪಿಯಲ್ಲಿದೆ. ಆ ಪಕ್ಷ ಪಂಚರಾಜ್ಯದಲ್ಲಿ ಯಾವ ರೀತಿ ಸೋತಿದೆಯೋ, ಅದೇ ರೀತಿ ರಾಜ್ಯದಲ್ಲಿ ಸೋಲಲಿದೆ ಎಂದು ಹೇಳಿದರು.
ಓದಿ: ಪಂಚರಾಜ್ಯಗಳಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್.. ನಾಳೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ