ಗುರುಮಠಕಲ್: ಕೋಟ್ಯಂತರ ಭಕ್ತರ ಆರಾಧ್ಯ ದೈವ ಯಾನಾಗುಂದಿಯ ಲಿಂ.ಮಾತಾ ಮಾಣಿಕೇಶ್ವರಿ ಅಮ್ಮನವರ ಜನ್ಮ ದಿನ ಹಾಗೂ ಗುರು ಪೂರ್ಣಿಮೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೆಲವೇ ಮಂದಿ ಪಟ್ಟಣದ ಲಕ್ಷ್ಮಿ ನಗರದ ಮಾತಾ ಮಾಣಿಕೇಶ್ವರಿ ಅಮ್ಮನವರ ಆಶ್ರಮದಲ್ಲಿ ಆಚರಿಸಿದರು. ಉಳಿದಂತೆ ಭಕ್ತರು ತಮ್ಮ ಮನೆಯಲ್ಲೇ ಗುರು ಪೂರ್ಣಿಮೆ ಆಚರಿಸಿದರು.
ಗುರು ಪೂರ್ಣಿಮೆ ಎಂದು ಮಾತಾ ಮಾಣಿಕೇಶ್ವರಿ ಅಮ್ಮನವರ ಜನುಮದಿನ ನಿಮಿತ್ತ ಪ್ರತಿ ವರ್ಷ ಲಕ್ಷಾಂತರ ಭಕ್ತರು ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟಕ್ಕೆ ದರ್ಶನಕ್ಕೆ ಬರುತ್ತಿದ್ದರು. ಆದರೆ, ಕೊರೊನಾ ಆತಂಕದಿಂದ ಭಕ್ತರು ಮನೆಯಲ್ಲೇ ಗುರು ಪೂರ್ಣಿಮೆ ಆಚರಿಸುವಂತಾಯಿತು. ಅಮ್ಮನವರ ಅಗಲಿಕೆಯ ನಂತರ ಮೊದಲ ಗುರುಪೂರ್ಣಿಮೆ ಇದಾಗಿದ್ದು, ಭಕ್ತರಿಗೆ ಹಲವು ವರ್ಷಗಳಿಂದ ದರ್ಶನ ಭಾಗ್ಯ ಕರುಣಿಸುತ್ತಿದ್ದ ಅಮ್ಮನವರು ಈಗಿಲ್ಲ. ಆದರೆ, ತಮ್ಮ ಅಗಾಧ ಶಕ್ತಿಯ ಮೂಲಕ ಇಡೀ ವಿಶ್ವದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರು ನೆಲೆಸಿದ್ದಾರೆ. ಅವರ ತತ್ತ್ವಾದರ್ಶಗಳು ಇಂದಿಗೂ ಸಹ ಜೀವಂತವಾಗಿವೆ.
ನಡೆದಾಡುವ ದೇವರಾಗಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರು ಈಗ ಸರ್ವಾಂತರ್ಯಾಮಿಯಾಗಿದ್ದಾರೆ. ಅಮ್ಮನವರನ್ನು ಮನದಲ್ಲೇ ಭಕ್ತಿಪೂರ್ವಕವಾಗಿ ಸ್ಮರಿಸಿದಲ್ಲಿ ಅವರ ದರ್ಶನ ದೊರೆಯಲಿದೆ ಎಂಬುದು ಭಕ್ತರ ಅಗಾಧ ವಿಶ್ವಾಸ.