ಸುರಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪೋಷಣ ಅಭಿಯಾನ ಜಾಥಾ ರಥಕ್ಕೆ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಚಾಲನೆ ನೀಡಿದ್ದಾರೆ.
ಅಭಿಯಾನದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಲಾಲ್ ಸಾಬ್ ಪೀರಾಪುರ್ ಮಾತನಾಡಿ, ದೇಶದ ಮಕ್ಕಳಲ್ಲಿನ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಗಳಲ್ಲಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸೇರಿವೆ. ಈ ಜಿಲ್ಲೆಗಳಲ್ಲಿನ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಮೂಲಕ ಪೋಷಕರು ತಮ್ಮ ಹೊಲ ಮತ್ತು ಮನೆಗಳ ಖಾಲಿ ಜಾಗದಲ್ಲಿ ತರಕಾರಿ ಹಣ್ಣಿನ ಗಿಡಗಳನ್ನು ಬೆಳೆದು ಮಕ್ಕಳಿಗೆ ತಿನ್ನಿಸುವ ಮೂಲಕ ಪೌಷ್ಟಿಕಾಂಶ ಹೆಚ್ಚಿಸಬೇಕು. ಸರ್ಕಾರದ ಯೋಜನೆಗಳ ಮೂಲಕ ನೀಡಲಾಗುವ ಹಾಲು ಮೊಟ್ಟೆ ಕಾಳುಗಳ ಸೇವನೆಯಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.