ಗುರುಮಠಕಲ್: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಸೈದಾಪುರದ ಕರಸೇವಕ ಪ್ರಭುಲಿಂಗ ವಾರದ ಅವರನ್ನು ಯುವ ಬ್ರಿಗೇಡ್ ವತಿಯಿಂದ ಸನ್ಮಾನಿಸಿ ಕರುನಾಡ ಹನುಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರಸೇವಕ ಪ್ರಭುಲಿಂಗ ವಾರದ, 1992ರಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಡೆದ ಹೋರಾಟದಲ್ಲಿ ಸೈದಾಪುರದ ನಾಗರೆಡ್ಡಿಗೌಡ ಮಾಲಿ ಪಾಟೀಲ್ ಅವರೊಂದಿಗೆ ಪಾಲ್ಗೊಳ್ಳಲಾಗಿತ್ತು. ಅವಿಭಜಿತ ಕಲಬುರಗಿ ಜಿಲ್ಲೆಯಿಂದ ತಂಡೋಪತಂಡವಾಗಿ ಬಸ್ ಹಾಗೂ ರೈಲುಗಳ ಮೂಲಕ ಅಯೋಧ್ಯೆಯನ್ನು ತಲುಪಿ ಎರಡು ದಿನಗಳ ಕಾಲ ರಾಮ ಜನ್ಮಭೂಮಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದಾಗಿ ತಿಳಿಸಿದರು.
ಹೋರಾಟ ವೇಳೆ ಭಾರತೀಯ ಹಿಂದೂಗಳ ಮನ-ಮನೆಗಳಲ್ಲಿ ಶ್ರೀರಾಮನ ಘೋಷೋದ್ಗಾರ ಮುಗಿಲು ಮುಟ್ಟಿತ್ತು. ಅಯೋಧ್ಯೆಯ ಪ್ರತೀ ಮನೆಯಲ್ಲಿ ದೀಪಾಲಂಕಾರ ಮಾಡಿ ಸ್ತ್ರೀ-ಪುರುಷ ಎನ್ನದೇ ಎಲ್ಲರೂ ಹೋರಾಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಜೀವ ಹೋದರೂ ಚಿಂತೆಯಿಲ್ಲ, ರಾಮನ ಜನ್ಮ ಭೂಮಿಯಲ್ಲಿಯೇ ಮಂದಿರ ನಿರ್ಮಾಣ ಮಾಡಬೇಕು ಎಂಬ ಕಿಚ್ಚು ಪ್ರತಿಯೊಬ್ಬ ಭಾರತೀಯ ಹಿಂದೂಗಳ ಭಾವನೆಯಾಗಿತ್ತು. ಆದರೆ ತಕ್ಷಣಕ್ಕೆ ಕೈಗೂಡಲಿಲ್ಲವಾದರೂ ಇಂದಿನ ಶಿಲಾನ್ಯಾಸಕ್ಕೆ ಅಂದಿನ ಹೋರಾಟ ಅಡಿಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಂದಿನ ಹೋರಾಟದಲ್ಲಿ ಪಾಲ್ಗೊಳ್ಳಲು ಸೈದಾಪುರದ ಸುಮಾರು 25ಕ್ಕೂ ಅಧಿಕ ಜನರು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಅಯೋಧ್ಯೆಗೆ ತೆರಳಿದ್ದು ನಾನು ಮತ್ತು ನಾಗರೆಡ್ಡಿ ಪಾಟೀಲ ಇಬ್ಬರು ಮಾತ್ರ ಎಂದು ತಿಳಿಸಿದರು. ಇಂದು ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಆಗುತ್ತಿರುವುದನ್ನು ಕಂಡು ನಮ್ಮ ಹೋರಾಟ ಸಾರ್ಥಕವಾಯಿತು ಎಂದು ಹೆಮ್ಮೆ ಎನಿಸುತ್ತಿದೆ. ಮಂದಿರ ಪೂರ್ಣಗೊಳ್ಳುವ ವೇಳೆಗೆ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಸುದೀರ್ಘ 28 ವರ್ಷಗಳ ಹಿಂದಿನ ಅಯೋಧ್ಯೆಯ ಹೋರಾಟದಲ್ಲಿ ಕರ ಸೇವಕರಾಗಿ ಭಾಗವಹಿಸಿದ್ದ ತಮ್ಮನ್ನು ಗುರುತಿಸಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ಸಂದರ್ಭದಲ್ಲಿ ಸನ್ಮಾನಿಸಿದ ಯಾದಗಿರಿ ಜಿಲ್ಲಾ ಯುವ ಬ್ರಿಗೇಡ್ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ಪರಮೇಶ ವಾರದ, ವೆಂಕಟೇಶ ಕಲಬುರಗಿ, ಮಲ್ಲೇಶ ನಾಯಕ ಕೂಡ್ಲೂರು, ಬಸವಲಿಂಗಪ್ಪ ಕಲಾಲ್, ಬಸ್ಸು ಕೂಡ್ಲೂರು ಮುಂತಾದವರು ಇದ್ದರು.