ಸುರಪುರ: ಶಹಾಪುರ ತಾಲೂಕಿನ ಮುಡಬೂಳ ಗ್ರಾಮದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ರಮ ರಸಗೊಬ್ಬರವಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಲಾರಿಯಲ್ಲಿ 298 ಪಾಕೆಟ್ ಜೈ ಕಿಸಾನ್ ಮಂಗಳ ಡಿಎಪಿ ರಸಗೊಬ್ಬರವನ್ನು ಯಾವುದೇ ಬಿಲ್ ಇಲ್ಲದೆ ಸಾಗಾಣಿಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕೃಷಿ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಲಾರಿ ಜಪ್ತಿ ಮಾಡಿದ್ದಾರೆ.
ಆರೋಪಿ ಗುರು ದೇಸಾಯಿ ಸಾ. ನೆಲೋಗಿ ಎಂಬುವರನ್ನು ಬಂಧಿಸಲಾಗಿದೆ. ಲಾರಿ ಸಮೇತ ರಸಗೊಬ್ಬರ ಪಾಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಸಗೊಬ್ಬರಕ್ಕೆ ಯಾವುದೇ ಬಿಲ್ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಗೊಬ್ಬರ ಪಾಕೆಟ್ ಗಳು ನಕಲಿ ಇರಬಹುದೆಂದು ಶಂಕಿಸಲಾಗಿದೆ. ಎಫ್‍ಎಸ್‍ಎಲ್ ಪರೀಕ್ಷೆ ನಂತರವೇ ರಸಗೊಬ್ಬರ ನಕಲಿ ಅಥವಾ ಅಸಲಿ ಕುರಿತು ಅಧಿಕೃತವಾಗಿ ತಿಳಿದು ಬರಲಿದೆ ಎಂದು ಭೀಮರಾಯನ ಗುಡಿ ಪಿಎಸ್‍ಐ ರಾಜಕುಮಾರ ಜಾಮಗೊಂಡ ತಿಳಿಸಿದ್ದಾರೆ.
ಈ ಅಕ್ರಮ ರಸಗೊಬ್ಬರ ಸಾಗಾಣಿಕೆಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಕುರಿತು ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ತಹಶೀಲ್ದಾರ್ ಜಗನ್ನಾಥರೆಡ್ಡಿ, ಗೋಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಶ ಸೇರಿದಂತೆ ಪೊಲೀಸರು ಇದ್ದರು.
ಹೀಗೆ ಕಳ್ಳದಂಧೆಯಿಂದ ರಸಗೊಬ್ಬರ ಮಾರಾಟ ಮಾಡುತ್ತಿರುವುದರಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಅಭಾವ ಉಂಟಾಗಿದೆ. ಜಿಲ್ಲಾಡಳಿತ ಕೂಡಲೇ ಇಂತಹ ದಂಧೆಕೋರರಿಗೆ ಕಡಿವಾಣ ಹಾಕಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.