ಯಾದಗಿರಿ: ಮೀಸಲಾತಿ ವಿಚಾರವಾಗಿ ನಮ್ಮ ಶ್ರೀಗಳು ರಾಜೀನಾಮೆ ನೀಡು ಅಂದ್ರೆ ನಾನು ರಾಜೀನಾಮೆ ನೀಡುವೆ. ಪ್ರತಿಪಕ್ಷ ಸ್ಥಾನಲ್ಲಿದ್ದಾಗ ಹೇಳಿದ ಮಾತನ್ನು ಈಗಲೂ ಹೇಳುವೆ ಎಂದು ಶಾಸಕ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜೂಗೌಡ ಹೇಳಿದರು.
ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ಯಾದಗಿರಿಯಲ್ಲಿ ಮಾತನಾಡಿದ ಅವರು, ನಾನು ಪ್ರತಿಪಕ್ಷದಲ್ಲಿದ್ದಾಗ ರಾಜೂಗೌಡ ತಂದೆ ಶಂಬನಗೌಡ ಅಂತ ನನ್ನ ಹೆಸರಿತ್ತು. ಇವತ್ತು ಆಡಳಿತ ಪಕ್ಷದಲ್ಲಿದ್ದೇನೆ. ಈಗಲೂ ಹಾಗೆಯೇ ಇದೆ. ನಾನು ನನ್ನ ತಂದೆ ಮಗ, ನಮ್ಮ ಶ್ರೀಗಳಿಗೆ ನೀಡಿದ ಮಾತಿಗೆ ನಾನು ಇಂದಿಗೂ ಬದ್ಧ ಎಂದು ತಮ್ಮ ಹೇಳಿಕೆಯನ್ನು ಮತ್ತೆ ಪುನರುಚ್ಚರಿಸಿದರು.
ನಮ್ಮ ಶ್ರೀಗಳಾದ ಪ್ರಸನ್ನಾನಂದ ಸ್ವಾಮೀಜಿ ಅವರು ರಾಜೀನಾಮೆ ನೀಡು ಅಂದ್ರೆ ನೀಡುವೆ. ಇಲ್ಲವೆ ವಿಧಾನಸಭೆಯಲ್ಲಿ ಹೋರಾಟ ಮಾಡು ಅಂತ ಹೇಳಿದರೆ ಅಲ್ಲಿಯೂ ಹೊರಾಟ ಮಾಡುವೆ. ನಮ್ಮ ಶ್ರೀಗಳ ಆಜ್ಞೆ ಏನು ಇರುತ್ತೋ ಅದನ್ನು ಪಾಲಿಸುತ್ತೇನೆ. ಇನ್ನು ನಮ್ಮ ಹಿಂದೆ ಸತೀಶ್ ಜಾರಕಿಹೊಳಿಯಂತ ಹಿರಿಯರಿದ್ದಾರೆ. ಅವರ ಮಾರ್ಗದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತಿರುತ್ತೆ ಎಂದರು.
ಇನ್ನು ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಬಾರಿಯಾದರೂ ನಮ್ಮ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಈ ಭಾಗಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು,