ಯಾದಗಿರಿ: ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೆೇಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಅದರಂತೆ ಅವರಿಗೆ ಸೋಲಿನ ರುಚಿ ತೋರಿಸಲಾಗಿದೆ ಎಂದು ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಚಿಂಚನಸೂರ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಖರ್ಗೆಯವರನ್ನು ಸೋಲಿಸಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರಿದ್ದೆ.ಅದರಂತೆ ಶಪಥ ಮಾಡಿ ಸೋಲಿಲ್ಲದ ಸರದಾರನಿಗೆ ಸೋಲುಣಿಸಿದ್ದೇನೆ ಎಂದಿರುವುದು ವಿಡಿಯೋದಲ್ಲಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪುನಃ ಸಿಎಂ ಮಾಡಬೇಕು. ಜೊತೆಗೆ ಕೋಲಿ ಸಮಾಜವನ್ನು ಎಸ್ಟಿ ಕೆಟಗರಿಗೆ ಸೇರಿಸಬೇಕಾಗಿರುವುದು ಮುಂದಿನ ಕೆಲಸ ಎಂದವರು ಹೇಳಿದ್ದಾರೆ.
ಇದೇ ವೇಳೆ ದೇವೇಗೌಡರ ವಿರುದ್ಧವೂ ಅವರು ಮಾತನಾಡಿದ್ದಾರೆ. ಅಪ್ಪ,ಮಗನ ಆಟಕ್ಕೂ ಈ ಬಾರಿ ಬ್ರೇಕ್ ಹಾಕಲಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಭವಿಷ್ಯವೇ ಇಲ್ಲದಂತಾಗಿದೆ ಎಂದು ವ್ಯಂಗವಾಡಿದರು. ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆಗೆ ಸೋಲಿನ ರುಚಿ ತೋರಿಸಲಾಗುವುದು ಎಂದು ಕಿಡಿಕಾರಿದರು.