ಯಾದಗಿರಿ: ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಲಾದ ಬ್ರಿಡ್ಜ್ ಕಮ್ ಬ್ಯಾರೇಜ್ನಲ್ಲಿ ಭಾರೀ ಶಬ್ಧ ಕೇಳಿ ಬರುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಗರದ ಹೊರವಲಯದಲ್ಲಿರುವ ಗುರಸಣಗಿ ಬಳಿಯ ಬ್ರಿಡ್ಜ್ ಕಮ್ ಬ್ಯಾರೇಜ್ಗೆ ಕಲಬುರಗಿಯ ಸನ್ನತಿ ಬ್ಯಾರೇಜ್ನಿಂದ 1 ಲಕ್ಷದ 10 ಸಾವಿರ ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ. ಇದರಿಂದಾಗಿ ಬ್ರಿಡ್ಜ್ ಕೆಳ ಭಾಗದಲ್ಲಿರುವ ಬ್ಯಾರೇಜ್ ಗೇಟ್ಗಳ ಅಕ್ಕಪಕ್ಕದಲ್ಲಿರುವ ಬೈಫರ್ಕೇಷನ್ ವಾಲ್ಗಳು ಜಖಂಗೊಂಡಿವೆ. ನಾಲ್ಕು ವಾಲ್ಗಳು ಡ್ಯಾಮೇಜ್ ಆಗಿದ್ದು, ನೀರಿನ ಹೊಡೆತಕ್ಕೆ ಅಲುಗಾಡುತ್ತಿವೆ. ಇದರಿಂದಾಗಿ ಬ್ರಿಡ್ಜ್ ಮೇಲೆ ಭಾರೀ ಶಬ್ಧ ಕೇಳಿ ಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಎಡಿಸಿ ಪ್ರಕಾಶ್ ಸಿಂಗ್ ರಾಜಪೂತ್ ಹಾಗೂ ನೀರಾವರಿ ಇಲಾಖೆ ಅಧಿಕಾರಿ ಶಿವಾಜಿ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿರುವ ಶಿವಾಜಿ ಅವರು, ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ನೀರಿನ ಪ್ರಮಾಣ ಕಡಿಮೆಯಾದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.