ಯಾದಗಿರಿ: ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯ ಶಹಪುರ ತಾಲೂಕಿನ ಕೊಳ್ಳೂರು ಸೇತುವೆ ಜಲಾವೃತಗೊಂಡಿದೆ.
ಕಲಬುರಗಿ, ಯಾದಗಿರಿ ಸೇರಿದಂತೆ ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಇದಾಗಿದ್ದು, ಸೇತುವೆ ಜಲಾವೃತ ಹಿನ್ನೆಲೆ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬಸವಸಾಗರ ಜಲಾಶಯದಿಂದ 2 ಲಕ್ಷದ 60 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗಿದ್ದು, ನದಿ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಕೊಳ್ಳೂರು ಬ್ರಿಡ್ಜ್ ಜಲಾವೃತಗೊಂಡಿದ್ದು, ಕೃಷ್ಣಾ ನದಿ ತೀರದ ಗ್ರಾಮಗಳಿಗೂ ನೀರು ನುಗ್ಗುವ ಸಾಧ್ಯತೆಗಳಿದ್ದು, ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.
ಕೊಳ್ಳೂರು ಬ್ರಿಡ್ಜ್ ಮೇಲಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸೇತುವೆ ಬಳಿ ಯಾರೂ ತೆರಳದಂತೆ ಈಗಾಗಲೇ ಪೊಲೀಸ್ ಭದ್ರತೆ ಕೂಡ ನಿಯೋಜನೆ ಮಾಡಲಾಗಿದೆ.