ಸುರಪುರ: ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ನಗರದಲ್ಲಿ ಪ್ರತಿಭಟಿಸಲಾಯಿತು.
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ 19 ವರ್ಷದ ಯುವತಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಕಾರ್ಯದರ್ಶಿ ಹಣಮಂತ ತನಿಖೆದಾರ ಮಾತನಾಡಿ, ದಲಿತ ಸಮುದಾಯದ ಯುವತಿ ಮೇಲಿನ ಅತ್ಯಾಚಾರ ಖಂಡನೀಯ. ಈ ಘಟನೆಯಲ್ಲಿ ಭಾಗಿಯಾದವರನ್ನು ಎನ್‌ಕೌಂಟರ್ ಮಾಡಬೇಕು. ಆಗ ಮಾತ್ರ ಬೇರೆಯವರಿಗೂ ಒಂದು ಪಾಠವಾಗಲಿದೆ. ಇಂತಹ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೂ ಮುನ್ನ ಮೃತ ಯುವತಿಯ ಭಾವಚಿತ್ರಕ್ಕೆ ಮೇಣದ ಬತ್ತಿ ಬೆಳಗಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.