ಗುರುಮಠಕಲ್: ಹಿಂದೂ ಹಾಗೂ ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಾದ ಮೊಹರಂ ಹಾಗೂ ಗಣೇಶ ಚತುರ್ಥಿ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸೋಣ ಎಂದು ಠಾಣೆಯ ಸಿಪಿಐ ದೇವೇಂದ್ರಪ್ಪ ದೂಳಖೇಡ್ ಕರೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಾಗೂ ಗಣೇಶ ಚತುರ್ಥಿಯ ಹಬ್ಬಗಳನ್ನು ಆಚರಿಸುವ ಸಲುವಾಗಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್-19 ಮಹಾಮಾರಿಯಿಂದ ಕಾಪಾಡಿಕೊಳ್ಳಲು ಎಲ್ಲರೂ ಮಾಸ್ಕ್ ಹಾಕಿಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಅವಶ್ಯಕ. ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಸರಕಾರದ ನಿಯಮ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಈ ಹಬ್ಬಗಳಲ್ಲಿ ಶಾಂತಿ ಕಾಪಾಡಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಹನುಮಂತ ಬಂಕಲಿಗಿ, ತಾ.ಪಂ ಸದಸ್ಯ ತಿಪ್ಪಣ್ಣ, ಪುರಸಭೆ ಸದಸ್ಯ ಪಾಪಣ್ಣ, ವೀರಪ್ಪ ಪಡಿಗೆ, ಅಕ್ಬರ್, ಸೂಗಪ್ಪ, ಅಮೀರ್, ಮಕ್ಬೂಲ್ ಪ್ಯಾರೆ, ಫಯಾಜ್ ಹಮ್ಮದ್, ನರಸಪ್ಪ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.