ಗುರುಮಠಕಲ್: ತಾಲೂಕು ವ್ಯಾಪ್ತಿಯಲ್ಲಿ ಬರುವ 17 ಗ್ರಾಮ ಪಂಚಾಯತ್ಗಳ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ತಯಾರಿ ನಡೆದಿದ್ದು, ಚುನಾವಣೆ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಹಶೀಲ್ದಾರ್ ಸಂಗಮೇಶ ಜಿಡಗೆ ತಿಳಿಸಿದರು.
ಗುರುಮಠಕಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯ 18 ಗ್ರಾಮ ಪಂಚಾಯತ್ಗಳಲ್ಲಿ ಅನಪುರ ಗ್ರಾಮ ಪಂಚಾಯತ್ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಆ ಪಂಚಾಯತ್ಯನ್ನು ಹೊರತುಪಡಿಸಿ ಉಳಿದ ಎಲ್ಲಾ 17 ಪಂಚಾಯತ್ಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ ಎಂದರು.
ನಾಮಪತ್ರ ಸಲ್ಲಿಕೆಗೆ ಡಿ.16 ಕೊನೆಯ ದಿನವಾಗಿದ್ದು, ಪರಿಶೀಲನೆಗೆ ಡಿ. 17 ಮತ್ತು ನಾಪಪತ್ರ ಹಿಂಪಡೆಯಲು ಡಿ.19 ವರೆಗೆ ಅವಕಾಶವಿದೆ. ಡಿ. 27 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಅವಶ್ಯವೆನಿಸಿದ ಸ್ಥಳಗಳಲ್ಲಿ ಮರುಮತದಾನವನ್ನು ಡಿ. 29 ರಂದು ಜರುಗಲಿದೆ. ಡಿ.30 ರಂದು ಬೆಳಗ್ಗೆ 8 ರಿಂದ ಮತ ಎಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ 154 ಮತಗಟ್ಟೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ಕೇಂದ್ರಗಳಲ್ಲಿ ಅವಶ್ಯಕವಾದ ವ್ಯವಸ್ಥೆ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಿದ್ದು, ಇದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು 6 ಮಂದಿ ಸೆಕ್ಟರ್ ಅಧಿಕಾರಿಗಳನ್ನು, ಮೂವರು ಫ್ಲೈಯಿಂಗ್ ಸ್ಕ್ವಾಡ್ ನೇತೃತ್ವದ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.