ಗುರುಮಠಕಲ್: ಗುರುಮಠಕಲ್ ಹೊರವಲಯದಲ್ಲಿನ ಮಳ್ಳ ಕಾಡಿನಲ್ಲಿರುವ ಬಂಡಲೋಗು ಜಲಪಾತ ನಯನ ಮನೋಹರವಾಗಿದೆ. ಮಲೆನಾಡ ಪಕೃತಿ ಸೊಬಗನ್ನು ಹೋಲುವ, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಸುಂದರ ತಾಣ ಬಹಳಾನೇ ಚೆಂದ. ಅದ್ರೆ ಮೂಲ ಸೌಕರ್ಯ ಮಾತ್ರ ಇಲ್ಲಿ ಕಣ್ಮರೆಯಾಗಿದೆ.
ಪಟ್ಟಣದ ಹೊರವಲಯದ ಸುಮಾರು 3 ಕಿ.ಮೀ ದೂರದಲ್ಲಿರುವ ಮಳ್ಳ ಕಾಡಿನಲ್ಲಿ ಈ ಜಲಪಾತವಿದೆ. ಬಂಡೆಗಳ ಮೇಲೆ ಹರಿಯುತ್ತಾ ಸಾಗಿ ಸುಮಾರು 30 ಅಡಿ ಎತ್ತರದಿಂದ ನೀರು ಧುಮಿಕ್ಕುವ ದೃಶ್ಯ ಬಹಳ ಆಕರ್ಷಕ. ಸ್ಥಳೀಯರು ಇದನ್ನು ಬಂಡಲೋಗು ಎಂದು ಕರೆಯುತ್ತಾರೆ. ತೆಲಂಗಾಣದ ಗಡಿಭಾಗವಾಗಿರುವ ಕಾರಣ ಈ ಭಾಗದಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚಿದೆ. ತೆಲುಗು ಭಾಷೆಯಲ್ಲಿ ಬಂಡಲೋಗು ಎಂದರೆ ಬಂಡೆಗಳ ಹಳ್ಳ ಎನ್ನುವ ಅರ್ಥವಿದೆ. ಈ ಹೊಳೆಯು ಬಂಡೆಗಳ ಮೇಲೆ ಹರಿಯುವುದರಿಂದ ಈ ಹೆಸರು ಬಂದಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಸಾಹಸಮಯ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಹರಿಯುವ ನೀರಿನಲ್ಲಿ ನಡೆದುಕೊಂಡು ಹೋಗುವುದು ಇನ್ನೂ ಚಂದ. ಕಲ್ಲಬಂಡೆಗಳಿಂದ ಕೂಡಿದ ಪ್ರದೇಶವಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಆಯ ತಪ್ಪಿ ಬೀಳುವುದು ಗ್ಯಾರಂಟಿ.
ಇದನ್ನೂ ಓದಿ: ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ನಿಧನ
ಗುರುಮಠಕಲ್, ನಜರಾಪುರ ಹಾಗೂ ಕೇಶ್ವಾರ ಗ್ರಾಮಗಳ ಮಧ್ಯದಲ್ಲಿ ಹರಡಿರುವ ಮಳ್ಳ ಅರಣ್ಯದಲ್ಲಿರುವ ಈ ಜಲಪಾತಕ್ಕೆ ಹೋಗಲು ಯಾವುದೇ ರಸ್ತೆಯಾಗಲಿ, ಮಾಹಿತಿಯಾಗಲಿ ಇಲ್ಲ. ಸ್ಥಳೀಯರ ನೆರವಿಲ್ಲದೇ ಹೋದರೆ ಕಾಡಿನಲ್ಲಿ ದಾರಿ ತಪ್ಪುವ ಸಾಧ್ಯತೆಯಿದೆ ಎನ್ನುತ್ತಾರೆ ಸ್ಥಳೀಯರಾದ ರವಿಂದ್ರರೆಡ್ಡಿ ಪೋತುಲ್.