ಯಾದಗಿರಿ: ಅನಾರೋಗ್ಯದಿಂದ ಬಳಲಿ ಜೀವ ಬಿಟ್ಟಿದ್ದ ಮಂಗನ ಮೃತದೇಹದ ಅಂತ್ಯ ಸಂಸ್ಕಾರವನ್ನ ವಿಧಿವತ್ತಾಗಿ ನೆರವೇರಿಸುವ ಮೂಲಕ ಜಿಲ್ಲೆಯ ಹುಣಸಗಿ ತಾಲೂಕಿನ ಮಳನೂರ ಗ್ರಾಮಸ್ಥರು ಮಾನವವೀಯತೆ ಮೆರೆದಿದ್ದಾರೆ.
ಕೆಲ ದಿನಗಳ ಹಿಂದೆ ಮಳನೂರ ಗ್ರಾಮದ ಬಳಿ ಇರುವ ಕೃಷ್ಣ ಎಡದಂಡೆ ಬಳಿ ಮಂಗವೊಂದು ನಿತ್ರಾಣಗೊಂಡು ಅನಾರೋಗ್ಯದಿಂದ ಬಳಲುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು, ಮಂಗನನ್ನು ರಕ್ಷಿಸಿ ಅದಕ್ಕೆ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಮಂಗ ಕಳೆದ ರಾತ್ರಿ ಮೃತಪಟ್ಟಿತ್ತು. ಹೀಗಾಗಿ ಗ್ರಾಮಸ್ಥರೆಲ್ಲ ಸೇರಿ ಆ ಮಂಗನಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜು ಎಂಬುವರ ಹೊಲದಲ್ಲಿ ವಿಧಿವತ್ತಾಗಿ ಅದರ ಅಂತ್ಯಕ್ರಿಯೆ ಕಾರ್ಯ ನೆರವೇರಿಸಿದ್ದಾರೆ.
ಅಂತ್ಯಸಂಸ್ಕಾರ ಮಾಡುವ ವೇಳೆ ಭಜನೆ, ಪ್ರಸಾದ ಸೇವೆ ಕಲ್ಪಿಸಿ ಮೃತ ಮಂಗಕ್ಕೆ ವಿದಾಯ ಸಲ್ಲಿಸಿದ್ದಾರೆ. ಮಂಗನ ಅಂತ್ಯಕ್ರಿಯೆ ಸ್ಥಳದಲ್ಲಿ ಆಂಜನೇಯ ದೇವಸ್ಥಾನ ಮಾಡುವುದಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.