ಗುರುಮಠಕಲ್: ಬೆಂಗಳೂರಿನ ಪಿಇಎಸ್ ವಿದ್ಯಾಸಂಸ್ಥೆ ಅಧ್ಯಕ್ಷರಾದ ಪ್ರೊ. ಎಂ.ಆರ್. ದೊರೆಸ್ವಾಮಿ ಅವರ ವತಿಯಿಂದ ಗುರುಮಠಕಲ್ ತಾಲೂಕಿನ ಗುಂಜನೂರು ಗ್ರಾಮದಲ್ಲಿ ಮತ್ತು ವಡಿಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾದ ರೈತರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.
ಪಿಇಎಸ್ ವಿದ್ಯಾ ಸಂಸ್ಥೆಯ ಪ್ರತಿನಿಧಿ ಸಾಯಿಬಣ್ಣ ಮೇಸ್ತ್ರಿ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಭೀಮಾ ನದಿ ಪಾತ್ರದ ರೈತರ ಜಮೀನು ಸೇರಿದಂತೆ ಹಲವಾರು ಹಳ್ಳಿಗಳ ರೈತರು ಬೆಳೆದ ಬೆಳೆಗಳು ನಾಶವಾಗಿವೆ. ಇದರಿಂದ ಸಂಕಷ್ಟಕ್ಕೀಡಾದ ರೈತರಿಗೆ ಮಾನವೀಯ ನೆರವಿನ ಹಸ್ತ ಚಾಚುವ ಮೂಲಕ ಗುರುಮಠಕಲ್ ತಾಲೂಕಿನ ಗುಂಜನೂರು ಗ್ರಾಮದ ಸುಮಾರು 500 ರೈತರಿಗೆ 10 ಕಿಲೋ ಅಕ್ಕಿ ಸೇರಿದಂತೆ ಆಹಾರ ಕಿಟ್ ವಿತರಿಸುವ ಮೂಲಕ ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ. ನಮ್ಮೆಲ್ಲರ ಮನವಿಯನ್ನು ಪರಿಗಣಿಸಿದ ದೊರೆಸ್ವಾಮಿಯವರು ಗುಂಜನೂರು, ವಡಿಗೇರಾ ತಾಲೂಕಿನ ನಾಯ್ಕಲ್ ಗ್ರಾಮ ಸೇರಿದಂತೆ ಸುಮಾರು 1,000 ರೈತ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣು ಗೌಡ ಗುಂಜನೂರ, ಶರಣು ಧರ್ಮಪೂರ, ಸಾಯಿಬಣ್ಣ ಮೇಸ್ತ್ರಿ, ಅನೀಲ್ ನಂದೇಪಲ್ಲಿ, ಶರಣಪ್ಪ ಮೇಸ್ತ್ರಿ, ಗುಜಾಲಪ್ಪ ಮೇಸ್ತ್ರಿ, ನಿಂಗಪ್ಪ ಸೇರಿದಂತೆ ಇನ್ನಿತರರಿದ್ದರು. ಶೇಕಡ 90 ರಷ್ಟು ಬೆಳೆ ಹಾನಿಗೊಳಗಾದ ರೈತರಿಗೆ ಈ ಸಂದರ್ಭದಲ್ಲಿ ಆಹಾರ ಕಿಟ್ ನೀಡಿರುವದರಿಂದ ರೈತರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದಂತಾಗಿದೆ.