ಸುರಪುರ (ಯಾದಗಿರಿ): ತಾಲೂಕಿನ ಮಾವಿನಮಟ್ಟಿ ಕೆರೆ ನೀರಿನಿಂದ ಹಾನಿಗೊಳಗಾದ ಜಮೀನುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹಾಗೂ ಮೀನು ಸಾಕಾಣಿಕೆಗೆ ಪರವಾನಿಗೆ ಕೋರಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಗೋಪಾಲ ತಳವಾರ ಅವರು, ಮಾವಿನಮಟ್ಟಿ ಗ್ರಾಮದಲ್ಲಿನ ಕೆರೆಯ ಒಡ್ಡನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಒಡೆದಿದ್ದಾರೆ. ಕೆರೆಯ ನೀರು ದಂಡೆಯಲ್ಲಿನ ದಲಿತರ ಜಮೀನುಗಳಿಗೆ ನುಗ್ಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ಸರ್ಕಾರ ಕೆರೆ ಒಡ್ಡನ್ನು ಒಡೆದಿರುವ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು. ಅಲ್ಲದೇ, ಪ್ರತಿವರ್ಷ ಜರಿಯ ನೀರಿಂದ ಬೆಳೆ ಹಾನಿಗೊಳಗಾಗುತ್ತಿರುವ ರೈತರಿಗೆ ಕೆರೆಯಲ್ಲಿ ಮೀನು ಸಾಕಾಣಿಕೆ ನಡೆಸಲು ಪರವಾನಿಗೆ ನೀಡಬೇಕು ಎಂದರು.
ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರೇಡ್-2 ತಹಶೀಲ್ದಾರ್ ಸೂಫಿಯಾ ಸುಲ್ತಾನ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.