ಯಾದಗಿರಿ: ಜಿಲ್ಲೆಯ ಶಹಾಪುರದ ಲಕ್ಷ್ಮಿ ವೈನ್ಸ್‌ನಲ್ಲಿ ನಕಲಿ ಮದ್ಯದ ದಾಸ್ತಾನು ಪತ್ತೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಇಂತಹ ಕೃತ್ಯದ ಬೆನ್ನತ್ತಿದ್ದ ಅಬಕಾರಿ ಪೊಲೀಸರ ತಂಡದ ಮೇಲೆಯೇ ಸುಮಾರು 30ಕ್ಕೂ ಹೆಚ್ಚು ಜನರು ಕಲ್ಲು ಬಡಿಗೆಗಳಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಪರಾರಿಯಾದ ಘಟನೆ ಗುರುವಾರ ಸಂಜೆ ಶಹಾಪುರ ತಾಲೂಕಿನ ಚಂದಾಪುರ ಗ್ರಾಮದ ಬಳಿ ನಡೆದಿದೆ.
ಶುಕ್ರವಾರ ಸಂಜೆ ಈ ಬಗ್ಗೆ ಗೋಗಿ ಪೊಲೀಸ್ ಠಾಣೆಯಲ್ಲಿ 20 ಜನರ ವಿರುದ್ಧ ಶುಕ್ರವಾರ ಸ್ವತಃ ಅಬಕಾರಿ ನಿರೀಕ್ಷಕ ವಿಜಯಕುಮಾರ್ ಹಿರೇಮಠ ಪ್ರಕರಣ ದಾಖಲಿಸಿದ್ದು, ನಕಲಿ ಮದ್ಯ ಪ್ರಕರಣ ಭೇದಿಸುವ ಸಂದರ್ಭದಲ್ಲಿ ನಡೆದ ಈ ಘಟನೆಯ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.
ಅಧಿಕಾರಿಯ ದೂರಿನಲ್ಲೇನಿದೆ ?: ನಕಲಿ ಮದ್ಯ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೇ 19ರಂದು ಸಂಜೆ ಶಹಾಪುರ ತಾಲೂಕಿನ ಅಬಕಾರಿ ಪೊಲೀಸರು ಚಾಮನಾಳ ಬಳಿ ಸ್ವಿಫ್ಟ್ ಕಾರೊಂದನ್ನು ತಡೆದಾಗ, ಡಿಕ್ಕಿಯಲ್ಲಿ ನಕಲಿ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ಚಾಲಕ ಹನುಮಂತ್ರಾಯ ಎಂಬಾತನನ್ನು ವಿಚಾರಿಸಿದಾಗ ಚಂದಾಪುರದಲ್ಲಿನ ಮುದುಕಪ್ಪ ಎಂಬುವವರ ತೋಟದ ಮನೆಗೆ ಒಯ್ಯುತ್ತಿರುವುದಾಗಿ ತಿಳಿಸಿದ್ದಾನೆ. ಈ ಮಾಹಿತಿ ಅರಿತ ಪೊಲೀಸರು ಸ್ಥಳ ಪರಿಶೀಲನೆಗೆಂದು ಅಲ್ಲಿಗೆ ತೆರಳಿದಾಗ, ಬೂದು ಬಣ್ಣದ ಪೆಟ್ಟಿಗೆಗಳಲ್ಲಿ ನಕಲಿ ಮದ್ಯದ ದಾಸ್ತಾನು ದೊರೆತಿದೆ.
ಪಂಚರ ಸಮ್ಮುಖದಲ್ಲಿ ಎಲ್ಲ ದಾಸ್ತಾನನ್ನು ಜಪ್ತಿ ಮಾಡಿ ಇನ್ನೇನು ಅಬಕಾರಿ ಪೊಲೀಸರು ಹೊರಡಬೇಕೆಂದಾಗ ಅಲ್ಲಿಗೆ ದೊಣ್ಣೆ ಕಲ್ಲುಗಳ ಸಮೇತ ಬಂದು 30 - 40 ಜನರ ಗುಂಪು ದಾಳಿ ನಡೆಸಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದೊಣ್ಣೆಗಳಿಂದ ಥಳಿಸಿ, ಕಾಲಿನಿಂದ ಒದ್ದಿದ್ದಾರೆ. ಅಲ್ಲದೇ, ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದ ಹನುಮಂತ್ರಾಯ ಎಂಬಾತನ್ನು ಬಿಡಿಸಿಕೊಂಡು ಪರಾರಿಯಾದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ಈ ಸಂಬಂಧ ಚಂದಾಪುರದ ಹನುಮಂತ್ರಾಯ ಸಾಹು, ಅಳ್ಳೊಳ್ಳಿಯ ಶರಣಪ್ಪಗೌಡ, ಮುದುಕಪ್ಪ, ಯೆಲ್ಲಪ್ಪ, ಮಡಿವಾಳಪ್ಪ, ಹಣಮಂತ್ರಾಯ ಸಾಹು ಮುಂತಾದವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಈ ದಾಳಿ ವೇಳೆ 41 ಪೆಟ್ಟಿಗೆಗಳಲ್ಲಿದ್ದ ಇಂಪೀರಿಯಲ್ ಬ್ಲೂ ಕಂಪನಿಯ 388.800 ಲೀಟರ್ ನಕಲಿ ಮದ್ಯದ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಗುಡ್ನ್ಯೂಸ್: ಕೇಂದ್ರದಿಂದ ಅಬಕಾರಿ ಸುಂಕ ಕಡಿತ; ಪೆಟ್ರೋಲ್ 9.5, ಡಿಸೇಲ್ ದರ 7 ರೂ. ಇಳಿಕೆ