ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಶಿಬಾರಬಂಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡುವಂತಾಗಿದೆ.
ಸುರಪುರ ನಗರಸಭೆ ವ್ಯಾಪ್ತಿಗೆ ಈ ಗ್ರಾಮ ನೂತನವಾಗಿ ಸೇರ್ಪಡೆಗೊಂಡಿದೆ. ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಈ ಕುಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಐದಾರು ಕಡೆಗಳಲ್ಲಿ ಕೊಳವೆ ಬಾವಿ ಕೊರೆಸಲಾದ್ದರು ಸಹ ನೀರು ಸಿಕ್ಕಿಲ್ಲ. ಸದ್ಯ ಕುಡಿಯುವ ನೀರಿಗಾಗಿ ದೂರದ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ದೂರದಲ್ಲೊಂದು ಕೈಪಂಪು ಇದ್ದರು ಆ ನೀರು ಸಹ ಉಪ್ಪು ನೀರು.
ಈ ಗ್ರಾಮದಲ್ಲಿ ಸುಮಾರು 40 ರಿಂದ 50 ಕುಟುಂಬಗಳು ವಾಸಿಸುತ್ತಿದ್ದು,ಇದುವರೆಗೂ ಒಂದು ಸಿಸಿ ರಸ್ತೆಯು ಸಹ ಇಲ್ಲಿಲ್ಲ. ಶಾಲಾ ಮಕ್ಕಳಿಗೂ ಕುಡಿಯಲು ನೀರಿಲ್ಲದೆ ಹೆದ್ದಾರಿ ದಾಟಿಕೊಂಡು ಬೋರ್ವೆಲ್ ಮೊರೆ ಹೋಗಿದ್ದಾರೆ. ಜನಪ್ರತಿನಿಧಿಗಳು ಕೇವಲ ಚುನಾವಣೆ ಬಂದಾಗ ಬರುತ್ತಾರೆ. ನಂತರ ನಮ್ಮತ್ತ ನೋಡುವುದಿಲ್ಲ ಎಂದು ಇಲ್ಲಿಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೆ ನಗರಸಭೆ ರಸ್ತೆ, ಬೀದಿ ದೀಪ, ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.