ಯಾದಗಿರಿ: ಶಿರಾ ಮತ್ತು ಆರ್ ಆರ್ ನಗರ ವಿಧಾನಸಭಾ ಉಪಚುನಾವಣೆ ಸೇರಿದಂತೆ ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಹತ್ತಿಕ್ಕಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ ಎಂದು ಮಾಜಿ ಎಂಎಲ್ಸಿ ಹಾಗೂ ಕಾಂಗ್ರೆಸ್ನ ಮುಂಖಂಡ ಚನ್ನಾರೆಡ್ಡಿ ತುನ್ನೂರು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಯಾವ ಸಚಿವರ ಮತ್ತು ಬೇರೆ ರಾಜಕಾರಣಿಗಳ ಮನೆ ಮೇಲೆ ದಾಳಿ ನಡೆಸಲಾಗುತ್ತಿಲ್ಲ. ಕೇವಲ ಡಿಕೆಶಿ ಅವರನ್ನೇ ಟಾರ್ಗೆಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ಕುತಂತ್ರ ನಡೆಸಿ ಬರುವ ವಿಧಾನಸಭಾ ಉಪಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಗಳನ್ನ ಹತ್ತಿಕ್ಕುವಂತ ಕೆಲಸ ಮಾಡುತ್ತಿದೆ ಎಂದರು. ನ್ಯಾಯಾಲಯದಿಂದ ಡಿಕೆಶಿ ಪರ ವಕಿಲರು ಸ್ಟೇ ತಂದರೂ ಸಿಬಿಐ ಅಧಿಕಾರಿಗಳು ಅದನ್ನ ನೋಡಲು ಸಿದ್ದರಾಗುತ್ತಿಲ್ಲ. ಸಂಪೂರ್ಣವಾಗಿ ಕೇಂದ್ರ ಬಿಜೆಪಿ ಸರ್ಕಾರದಿಂದ ಹಿಟ್ಲರ್ ರಾಜಕೀಯ ನಡೆಯುತ್ತಿದೆ. ಇದು ಬಹಳ ದಿನ ನಡೆಯುವುದಿಲ್ಲ. ದೇಶದ ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದರು.
ಈ ಹಿಂದೆಯೂ ಕೂಡ ಡಿಕೆಶಿ ವಿರುದ್ಧ ಐಟಿ, ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಈಗ ಮತ್ತೆ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಸಿಬಿಐ ದಾಳಿ ನಡೆಸಿದ್ದಾರೆ. ಚುನಾವಣೆ ಘೋಷಣೆ ಬಳಿಕ ಈ ದಾಳಿ ನಡೆದಿದೆ, ನಮ್ಮ ನಾಯಕ ಡಿಕೆಶಿ ಇದಕ್ಕೆಲ್ಲ ಅಂಜುವುದಿಲ್ಲ. ಕಾನೂನು ಹೊರಾಟ ನಡೆಸಿ ಎಲ್ಲ ಪ್ರಕರಣಗಳಿಂದ ಹೊರಬರಲಿದ್ದಾರೆ. ಬರುವ ವಿಧಾನಸಭಾ ಉಪಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಗಳಲ್ಲಿ ಮತದಾರರು ನಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.