ಸುರಪುರ (ಯಾದಗಿರಿ): ನಗರದಲ್ಲಿನ ಶ್ರೀ ಪ್ರಭು ಕಾಲೇಜು ಒಳಗೆ ಹೋಗುವ ಮುಖ್ಯ ದ್ವಾರದಲ್ಲಿನ ಸೇತುವೆ ಕುಸಿದಿದ್ದರಿಂದ, ಸೇತುವೆ ಕೆಳಗಿನ ಚರಂಡಿ ನೀರನ್ನು ಕಾಲೇಜು ಮೈದಾನದೊಳಗೆ ಹರಿಬಿಡಲಾಗಿದೆ.
ಚರಂಡಿ ಮೇಲೆ ಸೇತುವೆ ನಿರ್ಮಾಣಕ್ಕಾಗಿ ನೀರು ಹರಿದು ಹೋಗುವುದನ್ನು ತಡೆಯಲು ಚರಂಡಿಗೆ ಅಡ್ಡಲಾಗಿ ಮಣ್ಣು ಹಾಕಿ ನಿಲ್ಲಿಸಿ ಎಲ್ಲ ನೀರನ್ನು ಮೈದಾನದ ಕಡೆಗೆ ಹರಿಸಲಾಗಿದೆ. ಇದರಿಂದ ಚರಂಡಿ ನೀರು ಮೈದಾನದಲ್ಲಿ ಸಂಗ್ರಹಣೆಯಾಗಿದ್ದರಿಂದ ಮೈದಾನ ಮತ್ತು ಸುತ್ತ-ಮುತ್ತಲಿನ ಪ್ರದೇಶ ದುರ್ನಾತಕ್ಕೀಡಾಗಿದೆ.
ನಿತ್ಯವೂ ನೂರಾರು ಜನ ಕಾಲೇಜು ಮೈದಾನದಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದು, ಸದ್ಯ ಕೊಳಕು ನೀರಿನ ದುರ್ನಾತದಿಂದ ಜನರು ಬೇಸರಗೊಂಡಿದ್ದಾರೆ.
ಕಾಲೇಜು ಮೈದಾನದ ಪಕ್ಕದಲ್ಲಿರುವ ಝಂಡದಕೇರಾ ಮತ್ತು ಕಾನಿಕೇರಾ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾಲೇಜಿನ ನೌಕರರು ಕೂಡ ದುರ್ನಾತಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ನಗರಸಭೆಯೇ ನೇರ ಹೊಣೆಯಾಗಲಿದೆ ಎಂದು ಜನತೆ ಎಚ್ಚರಿಸಿದ್ದಾರೆ.
ನಗರಸಭೆ ಕೂಡಲೇ ಎಚ್ಚೆತ್ತು ಚರಂಡಿ ನೀರು ಚರಂಡಿಗೆ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಮತ್ತು ತ್ವರಿತವಾಗಿ ಸೇತುವೆ ಕಾಮಗಾರಿ ಮುಗಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಮೂಲನಿವಾಸಿ ಹಾಗೂ ಅಂಬೇಡ್ಕರ್ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ಎಚ್ಚರಿಸಿದ್ದಾರೆ.