ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ನಾಗರ ಕೆರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ಅವರು ಅಲ್ಲಿನ ವ್ಯವಸ್ಥೆ ಕುರಿತು ತಾಲೂಕಿನ ದಂಡಾಧಿಕಾರಿಗಳಿಂದ ಮಾಹಿತಿ ಪಡೆದರು. 24 ಗಂಟೆವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಕೆರೆಯ ಹತ್ತಿರ ಹೋಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಯ ಎತ್ತರ ಮತ್ತು ನೀರು ಸಂಗ್ರಹ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಿದ ಕಾರ್ಯನಿರ್ವಾಹಕ ಅಭಿಯಂತರ ಶಂಕರ ರುಬಿಕರ್, ಕೆರೆಯ ದುರಸ್ಥಿ ಕಾಮಗಾರಿ ತಾತ್ಕಾಲಿಕವಾಗಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಕಾಮಗಾರಿಗಳ ವಿವರಣೆ ನೀಡಿದರು.
ಕೆರೆಯ ಮುಂಭಾಗದಲ್ಲಿ ಸುಮಾರು 5 ಸಾವಿರ ಮನೆಗಳಿವೆ. ಸದ್ಯದ ಮಟ್ಟಿಗೆ ಯಾವುದೇ ಅಪಾಯವಿಲ್ಲ. ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹಾಗಾಗಿ, ಸಾರ್ವಜನಿಕರು ಕೆರೆಯ ಹತ್ತಿರ ಹೋಗದಂತೆ ಮುಂಜಾಗ್ರತಾ ಕ್ರಮವಹಿಸಿ ಎಂದು ರಾಗಪ್ರಿಯಾ ಆರ್ ಅಧಿಕಾರಿಗಳಿಗೆ ಸೂಚಿಸಿದರು.
ತಾವರೆಕೆರೆಯಿಂದ ಹೆಚ್ಚಾದ ನೀರು ಈ ನಾಗರ ಕೆರೆಗೆ ಹರಿದು ಬರುತ್ತಿದೆ. ಇಲ್ಲಿ ತುಂಬಿ ಹೆಚ್ಚಾದ ನೀರನ್ನು ಪಕ್ಕದಲ್ಲಿರುವ ಒಂದು ನಾಲೆಯ ಮೂಲಕ ಹೊರ ಬಿಡಲಾಗುತ್ತದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ, ಸಹಾಯಕ ಆಯುಕ್ತ ಶಂಕರಗೌಡ ಎಸ್ ಸೋಮನಾಳ, ಶಹಾಪುರ ತಾಲೂಕು ತಹಶೀಲ್ದಾರ್ ಜಗನ್ನಾಥ ರೆಡ್ಡಿ, ಕಾರ್ಯನಿರ್ವಾಹಕ ಅಭಿಯಂತರ ಶಂಕರ ರುಬಿಕರ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶರಣಪ್ಪ ಪೂಜಾರ್, ನಗರಸಭೆಯ ಅಭಿಯಂತರರು ಸೇರಿ ಇತರರು ಹಾಜರಿದ್ದರು.