ಯಾದಗಿರಿ: ಹಸಿರು ವಲಯ ಯಾದಗಿರಿಗೆ ಮಹಾಮಾರಿ ಕೊರೊನಾ ವಕ್ಕರಿಸಿದೆ. ಜಿಲ್ಲೆಯ ಸುರಪುರ ಪಟ್ಟಣದ ದಂಪತಿಗೆ ಕೊರೊನಾ ಸೋಂಕು ತಗುಲಿರುವುದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ದೃಢಪಡಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಸುರಪುರ ಪಟ್ಟಣದಿಂದ ಈ ದಂಪತಿ ಹಾಗೂ ಅವರ ಮಗ ಸೇರಿ ಮೂರು ಜನ ಗುಜರಾತ್ನ ಅಹಮದಾಬಾದ್ ಗೆ ತೆರಳಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಲ್ಲಿರುವ ಸಂಬಂಧಿಕರ ಮನೆಯಲ್ಲಿ ಈ ಮೂವರು ವಾಸವಾಗಿದ್ದರು. ಇದೆ ತಿಂಗಳು ಮೇ 9 ರಂದು ಗುಜರಾತ್‌ನಿಂದ ಲಾರಿ ಮೂಲಕ ಬಾಗಲಕೋಟೆ ಜಿಲ್ಲೆಯ ಹುನಗುಂದದ ಹೆದ್ದಾರಿ ಬಳಿ ಮಗನ ಸಹಿತ ಈ ದಂಪತಿ ಬಂದಿಳಿದಿದ್ದರು.
ಅಲ್ಲಿಂದ ಕಾರ್ ಮೂಲಕ ಸುರಪುರದ ಜ್ವರ ತಪಾಸಣೆ ಕೇಂದ್ರಕ್ಕೆ ನಿನ್ನೆ ಬಂದಿಳಿದಿದ್ದರು. ತಪಾಸಣೆ ವೇಳೆ ಕೊರೊನಾ ಶಂಕೆ ಕಾಣಿಸಿಕೊಂಡಿದ್ದರಿಂದ ದಂಪತಿ ಸೇರಿದಂತೆ ಇವರ ಮಗ ಹಾಗೂ ಕಾರ್ ಚಾಲಕನ ಸ್ವ್ಯಾಬ್ ಸ್ಯಾಂಪಲ್ ಅನ್ನು ಕಲಬುರಗಿ ಲ್ಯಾಬ್ಗೆ ರವಾನಿಸಲಾಗಿದೆ. ನಂತರ ಇವರನ್ನು ನಿಸ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ನಾಲ್ಕು ಜನರ ಸ್ವ್ಯಾಬ್ ಸ್ಯಾಂಪಲ್ಗಳ ಪೈಕಿ ದಂಪತಿಗೆ ಕೊರೊನಾ ಆವರಿಸಿದೆ.