ಯಾದಗಿರಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ತನ್ನ ವಿಸ್ತರಣಾ ನೀತಿಯನ್ನ ಮುಂದುವರೆಸಿದೆ. ಮಹಾರಾಷ್ಟ್ರದಿಂದ ಆಗಮಿಸಿದ ವಲಸಿಗರಲ್ಲೇ ಹೆಚ್ಚಾಗಿ ಕಾಣುತ್ತಿದ್ದ ಈ ಸೋಂಕು ಈಗ ಸಮುದಾಯದ ಹಂತಕ್ಕೂ ವ್ಯಾಪಿಸುತ್ತಿದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿದ ವ್ಯಕ್ತಿಗಳಿಗೂ ಈ ಸೋಂಕು ತಗುಲುತ್ತಿದ್ದು , ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.
ತಾಲೂಕಿನ ಹತ್ತಿಕುಣಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಕಾವಲುಗಾರನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬ್ಯಾಂಕ್ ಅಕ್ಕಪಕ್ಕದ ಅಂಗಡಿಗಳನ್ನ ಈಗಾಗಲೇ ಸೀಲ್ಡೌನ್ ಮಾಡಲಾಗಿದೆ. ಸೋಂಕು ತಗುಲಿದ ಕಾವಲುಗಾರನ ಪ್ರಾಥಮಿಕ ಸಂಪರ್ಕದಲ್ಲಿದ್ದ ಬ್ಯಾಂಕ್ನ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದಾರೆ.
ಇನ್ನೂ ಸೋಂಕು ದೃಢಪಟ್ಟ ವ್ಯಕ್ತಿ ಕಳೆದ ಒಂದು ವಾರದ ಹಿಂದೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ. ತಾಲೂಕಿನ ಹೊನಗೇರಾ ಗ್ರಾಮದ ವ್ಯಕ್ತಿ ಜೊತೆ ಪ್ರಾಥಮಿಕ ಸಂಪರ್ಕ ಹಿನ್ನೆಲೆ ಈತನಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕು ತಗುಲಿದ ಬ್ಯಾಂಕ್ ಕಾವಲುಗಾರನನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಸೋಂಕಿತ ವ್ಯಕ್ತಿಯ ಮಗಳ ಮದುವೆ ಜೂನ್ 28 ರಂದು ರಾಯಚೂರಿನಲ್ಲಿ ನಿಶ್ಚಯವಾಗಿತ್ತು. ಹೀಗಾಗಿ ಮಗಳ ಮದುವೆಗಾಗಿ ಮೃತ ಸೋಂಕಿತ ವ್ಯಕ್ತಿ ಹತ್ತಿಕುಣಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಲೋನ್ ಅಪ್ಲೈ ಮಾಡಿದ್ದ. ಲೋನ್ ಮಂಜೂರಾದ ಬಳಿಕ ಹಣ ಪಡೆಯಲು ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಶಾಖೆಗೆ ಕಾವಲುಗಾರನೊಂದಿಗೆ ಹಣ ಪಡೆಯಲು ಬಂದಿದ್ದಾನೆ ಎಂದು ತಿಳಿದು ಬಂದಿದೆ.
ರಾಯಚೂರಿನಲ್ಲಿ ಮಗಳ ಮದುವೆ ಮಾಡಿದ ಮರುದಿನವೇ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹತ್ತಿಕುಣಿ ಗ್ರಾಮದ ಬ್ಯಾಂಕ್ ಕಾವಲುಗಾರನಿಗೆ ಸೋಂಕು ತಗಲಿರುವುದು ಪತ್ತೆಯಾಗುತ್ತಿದ್ದಂತೆ ಕಾವಲುಗಾರನ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಎದೆಯಲ್ಲೀಗ ನಡುಕ ಶುರುವಾಗಿದೆ.
ಸೋಂಕಿತ ಕಾವಲುಗಾರನ ಸಂಪರ್ಕದಲ್ಲಿರುವ ಬ್ಯಾಂಕ್ ನ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರದಿ ಬರುವವರೆಗೂ ಹೋಂ ಕ್ವಾರಂಟೈನ್ ನಲ್ಲಿಡಬೇಕಾದ ಜಿಲ್ಲಾಡಳಿತ ಅವರಿಗೆ ಯಾವ ಸೂಚನೆಯನ್ನೂ ಕೂಡ ನೀಡಿಲ್ಲ. ಹೀಗಾಗಿ ಆ ಬ್ಯಾಂಕ್ ನ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ಬ್ಯಾಂಕ್ಗೆ ಆಗಮಿಸಿ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಮೂಲಕ ನೂರಾರು ಜನರೊಂದಿಗೆ ಸಂಪರ್ಕ ಹೊಂದುತ್ತಿದ್ದಾರೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚುವ ಸಾಧ್ಯತೆಗಳು ಹೆಚ್ಚಾಗುತ್ತಿರುವುದರಿಂದ ಜನರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.