ಯಾದಗಿರಿ: ಸೈದಾಪುರ ಪಟ್ಟಣದಿಂದ ದುಬೈ ಪ್ರವಾಸಕ್ಕೆ ತೆರಳಿ ವಾಪಸ್ಸು ಬಂದಿರುವ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ವೈರಸ್ ಹರಡಿರುವ ಶಂಕೆಯಿಂದ ಅವರಿಬ್ಬರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ವೈದ್ಯರು ತೀವ್ರ ನಿಗಾ ಇರಿಸಿದ್ದಾರೆ.
ಸೈದಾಪುರ ಪಟ್ಟಣದ ಸ್ನೇಹಿತರಿಬ್ಬರು ಮಾರ್ಚ 6ರಂದು ದುಬೈ ಪ್ರವಾಸಕ್ಕೆ ತೆರಳಿದ್ದರು. ನಿನ್ನೆಯಷ್ಟೇ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ತಮ್ಮ ಗ್ರಾಮ ಸೈದಾಪುರಕ್ಕೆ ವಾಪಸ್ಸಾಗಿದ್ದರು. ಈ ವಿಷಯ ತಿಳಿದ ಜಿಲ್ಲಾ ಆರೋಗ್ಯ ಇಲಾಖೆ ವೈದ್ಯರು ಅವರಿಬ್ಬರ ಮನೆಗೆ ತೆರಳಿ ತೀವ್ರ ತಪಾಸಣೆ ನಡೆಸಿದರು. ಬಳಿಕ ಅವರಿಗೆ ಪ್ರತ್ಯೇಕ ರೂಮ್ನಲ್ಲಿ ಇರುವಂತೆ ಸಲಹೆ ನೀಡಿದ್ದಾರೆ. ಮುಂದಿನ ನಿರ್ದೇಶನದವರೆಗೆ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ.
ಇನ್ನು ತೀವ್ರ ತಪಾಸಣೆ ಕೈಗೊಂಡಿರುವ ವೈದ್ಯರು ಇಲ್ಲಿಯವರೆಗೆ ಯಾವುದೇ ಕೊರೊನಾ ಸೋಂಕು ತಗಲಿರುವ ಲಕ್ಷಣ ಗೋಚರಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಅಂತ ಸ್ಪಷ್ಟನೆ ನೀಡಿದ್ದಾರೆ.