ಯಾದಗಿರಿ: ಕೊಡೇಕಲ್ ಪೊಲೀಸ್ ಠಾಣೆಯ ಪಿಎಸ್ಐ ಅಮಾನತಿಗೆ ಆಗ್ರಹಿಸಿ, ಹುಣಸಗಿ ಪಟ್ಟಣದಲ್ಲಿ ಪ್ರತಿಭಟನೆಯಲ್ಲಿ ನಡೆಸಲಾಯಿತು. ಸುರಪುರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ರಾಜಾ ವೆಂಕಟಪ್ಪ ನಾಯಕ, ಕಳೆದ ಒಂದೂವರೆ ವರ್ಷದಿಂದ ಕೊಡೇಕಲ್ ಹಾಗೂ ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಕೊಲೆ, ದರೋಡೆ ಪ್ರಕರಣಗಳು ನಡೆದಿದ್ದು, ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ತಿಂಗಳು ಕೊಡೇಕಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಕೊಡೇಕಲ್ ಪಿಎಸ್ಐ ವಿಫಲರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ರು. ಕೊಡೇಕಲ್ನಲ್ಲಿ ಪೊಲೀಸ್ ಠಾಣೆ ಇದ್ದರೂ ಇಲ್ಲದಂತಾಗಿದ್ದು, ಠಾಣೆಯನ್ನು ಕಿತ್ತು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ್ ಪಾಟೀಲ್ ವಜ್ಜಲ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಲಿಂಗರಾಜ ಬಾಚಿಮಟ್ಟಿ, ರಾಜಾ ವೇಣುಗೋಪಾಲ ನಾಯಕ ಸೇರಿದಂತೆ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ರು.